ಉಡುಪಿ ಜ. 29 : ಹಂಗಾರಕಟ್ಟೆ ಸಮೀಪದ ಬೆಂಗ್ರೆಯಲ್ಲಿ ನಡೆದ ದೋಣಿ ದುರಂತದಲ್ಲಿ ಮೂವರು ಪ್ರಾಣ ಕಳೆದುಕೊಂಡ ಘಟನೆ ಬಳಿಕ ಜಿಲ್ಲಾಡಳಿತ ಸೇರಿದಂತೆ ಪ್ರವಾಸೋದ್ಯಮ, ಬಂದರು ಹಾಗೂ ಪೊಲೀಸ್ ಇಲಾಖೆ ಚಟುವಟಿಕೆಗೆ ಮುಂದಾಗಿವೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳ ಮೇಲೆ ಅಧಿಕಾರಿಗಳ ಗಮನ ಹರಿದಿದ್ದು, ಇಂತಹ ಚಟುವಟಿಕೆ ನಡೆಸುತ್ತಿರುವವರು 45 ದಿನಗಳೊಳಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿವೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಅನಧಿಕೃತವಾಗಿ ಪ್ರವಾಸೋದ್ಯಮ ಚಟುವಟಿಕೆಗಳ ಬಗ್ಗೆ ಗಮನದಲ್ಲಿದ್ದರೂ ಈವರೆಗೂ ಪರಿಣಾಮಕಾರಿಯಾದ ಕ್ರಮಗಳನ್ನು ವಿವಿಧ ಇಲಾಖೆಗಳು ಕೈಗೊಂಡಿರಲಿಲ್ಲ. ಇದೂ ಸಹ ದೋಣಿ ದುರಂತಕ್ಕೆ ಕಾರಣ ಎಂಬ ಅಭಿಪ್ರಾಯವೂ ಸಾರ್ವಜನಿಕರದ್ದು. ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಅಗತ್ಯ ಎಂಬುದು ಸ್ಥಳೀಯರ ಆಗ್ರಹ.
ಅಕ್ರಮ ಹೋಂ ಸ್ಟೇಗಳು
ಕರಾವಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಅಕ್ರಮ ಹೋಂ ಸ್ಟೇಗಳೂ ಸಾಕಷ್ಟಿವೆ. ಇವುಗಳಿಂದ ಪರಿಸರಕ್ಕೂ ಹಾನಿ ಹಾಗೂ ಅನಧಿಕೃತವಾಗಿ ಕೆಲವು ಸಾಹಸ ಚಟುವಟಿಕೆಗಳನ್ನೂ ನಡೆಸುತ್ತಿವೆ. ಇವುಗಳ ವಿರುದ್ಧವೂ ಜಿಲ್ಲಾಡಳಿತ ಹಾಗೂ ಇಲಾಖೆಗಳು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿದೆ.
ವೀಡಿಯೋ ವೈರಲ್
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸಹಿತ ಕೆಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಜ.26ರಂದು ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗುವ ಸಂದರ್ಭದಲ್ಲಿ ಲೈಪ್ ಜಾಕೆಟ್ ಧರಿಸದೇ ಕೈಯಲ್ಲಿ ಹಿಡಿದುಕೊಂಡು ದೋಣಿಯಲ್ಲಿ ಸಾಗುತ್ತಿರುವ ವೀಡಿಯೋ ಈಗ ಎಲ್ಲೆಡೆ ಹರಡಿದೆ. ಸಚಿವರು, ಅಧಿಕಾರಿಗಳೇ ನಿಯಮ ಪಾಲಿಸದೇ ಸಾರ್ವಜನಿಕರಿಗೆ ನಿಯಮ ಪಾಲಿಸಿ ಎಂದು ಹೇಗೆ ಹೇಳುತ್ತಾರೆ ಎಂಬುದು ಹಲವರ ಪ್ರಶ್ನೆ. ನೋಂದಣಿ ಕಡ್ಡಾಯ
ನಿಯಮಗಳ ಪ್ರಕಾರ, ಪ್ರತಿಯೊಂದು ದೋಣಿಯಲ್ಲೂ ಎಲ್ಲ ಪ್ರಯಾಣಿಕರಿಗೆ ಲೈಫ್ ಜಾಕೆಟ್‌ಗಳನ್ನು ಒದಗಿಸಬೇಕಿದ್ದು, ತುರ್ತು ಪರಿಸ್ಥಿತಿಯಲ್ಲಿ ಅವುಗಳನ್ನು ಧರಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ. 27ರಂದು ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲಾಡಳಿ ತವು ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗಿದೆ. ದೋಣಿ ಪ್ರಯಾಣದ ಸಂಪೂರ್ಣ ಅವಧಿಯಲ್ಲಿ ಲೈಫ್ ಜಾಕೆಟ್ ಕಡ್ಡಾಯವಾಗಿ ಧರಿಸುವ ನಿಯಮ ಜಾರಿ ಹಾಗೂ ಧರಿಸದವರ ವಿರುದ್ಧ ದಂಡ ವಿಧಿಸಲು ಚಿಂತನೆ ನಡೆದಿದೆ. ಈ ಸಂಬಂಧ ಎಲ್ಲ ದೋಣಿ ಮಾಲಕರಿಗೆ, ಸಾರ್ವಜನಿಕರಿಗೆ ಮಾಹಿತಿ, ಎಚ್ಚರಿಕೆ ಸಂದೇಶ ನೀಡಲಿದ್ದೇವೆ ಎಂದು ಎಸ್ ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಠಾಣೆಯಲ್ಲಿ ಸಭೆ
ವಾಟರ್ ಸೋರ್ಟ್ಸ್ ಹಾಗೂ ಟೂರಿಸ್ಟ್ ಬೋಟ್, ಕಯಾಕಿಂಗ್ ಮಾಲಕರ ಸಭೆಯೂ ಮಲ್ಪೆಯ ಕರಾವಳಿ ಕಾವಲು ಪಡೆಯ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದೆ. 40 ಬೋಟ್ ಮಾಲಕರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಸರಿಯಾದ ದಾಖಲೆಗಳನ್ನು ಕಡಾªಯವಾಗಿ ಸಿದ್ಧಪಡಿಸಿಕೊಂಡು ಬೋಟ್/ ಕಯಾಕಿಂಗ್ ಹಾಗೂ ಇನ್ನಿತರ ವಾಟರ್‌ನ್ಪೋರ್ಟ್ಸ್ ಚಟುವಟಿಕೆಗಳನ್ನು ನಡೆಸುವಂತೆ ಸಭೆಯಲ್ಲಿ ಸೂಚಿಸಲಾಗಿದೆ.
ಭ್ರಷ್ಟಾಚಾರಕ್ಕೂ ಬೀಳಲಿ ಕಡಿವಾಣ:
ಅನೇಕ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಹೊಸ ನೋಂದಣಿ, ನೋಂದಣಿ ನವೀಕರಣದ ಸಂದರ್ಭದಲ್ಲಿ ನಿಯಮ ಮೀರಿ ನಡೆದುಕೊಳ್ಳುವವರ ಬಗ್ಗೆ ಮಾಹಿತಿಯಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಕಾರಣ ಅಧಿಕಾರಿಗಳು ಪ್ರವಾಸೋದ್ಯಮ ಚಟುವಟಿಕೆ ನಡೆಸುವವರಿಂದ ಯಾವುದೋ ರೀತಿಯಲ್ಲಿ ಅನುಕೂಲತೆ ಪಡೆದಿರುತ್ತಾರೆ. ಹೀಗಾಗಿ ಅಧಿಕಾರಗಳ ಹಂತದಲ್ಲಿ ನಡೆಯುವ ಎಲ್ಲ ರೀತಿಯ ಭ್ರಷ್ಟಾಚಾರ ಮೊದಲು ನಿಲ್ಲಬೇಕು ಎಂಬ ದೂರುಗಳು ಕೇಳಿ ಬರುತ್ತಿವೆ.






