ಉಡುಪಿ: ಸೋಮವಾರ ಬೆಳಗ್ಗೆ ಉಡುಪಿ ಜಿಲ್ಲೆಯ ಕೋಡಿಬೆಂಗ್ರೆ ಬೀಚ್ ಸಮೀಪ ವಿಹಾರಕ್ಕೆ ತೆರಳಿದ್ದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಸಮುದ್ರದಲ್ಲಿ ಪಲ್ಟಿಯಾದ ದುರಂತ ಸಂಭವಿಸಿದೆ. ಈ ಅವಘಡದಲ್ಲಿ ಶಂಕರಪ್ಪ (22) ಮತ್ತು ಸಿಂಧು (23) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ದೀಶಾ (26) ಎಂಬವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಧರ್ಮರಾಜ (26) ಎಂಬವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಗರನ್ನು ವಿಹಾರಕ್ಕೆಂದು ಮಲ್ಪೆ ಡೆಲ್ಟಾ ಬೀಚ್ ಪಾಯಿಂಟ್‌ನಿಂದ ಕರೆದೊಯ್ಯುತ್ತಿದ್ದ ದೋಣಿ ಹಂಗಾರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ನದಿ ಮತ್ತು ಸಮುದ್ರ ಸೇರುವ ಅಳಿವೆ ಬಾಗಿಲಿನಲ್ಲಿ ಮಗುಚಿ ಬಿದ್ದಿದೆ. ಇದರಲ್ಲಿ ಸುಮಾರು 14 ಮಂದಿ ಪ್ರವಾಸಿಗರಿದ್ದು, ಇವರು ಯಾರು ಕೂಡ ಲೈಫ್ ಜಾಕೆಟ್ ಧರಿಸಿಲ್ಲ ಎಂದು ತಿಳಿದುಬಂದಿದೆ.
ದೋಣಿಯಲ್ಲಿದ್ದವರು ಮೈಸೂರಿನ ಸರಸ್ವತಿಪುರಂನಲ್ಲಿರುವ ಕಾಲ್ ಸೆಂಟರ್ ವೊಂದರ ಉದ್ಯೋಗಿಗಳು ಎನ್ನಲಾಗಿದೆ. ‘ವೇವ್‌ರೈಡರ್ಸ್’ ಕಂಪನಿಗೆ ಸೇರಿದ ಈ ದೋಣಿಯಲ್ಲಿ ಒಟ್ಟು 14 ಮಂದಿ ಪ್ರವಾಸಿಗರಿದ್ದರು. ದುರಂತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಇತರ ದೋಣಿಯಲ್ಲಿದ್ದವರು ಎಲ್ಲರನ್ನೂ ರಕ್ಷಿಸಿ ದಡಕ್ಕೆ ತಂದಿದ್ದಾರೆ. ಘಟನೆಯ ವೇಳೆ ನಾಲ್ವರು ಗಂಭೀರ ಸ್ಥಿತಿಯಲ್ಲಿದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.






