ಮಂಗಳೂರು: ಬೆಂಗಳೂರು ಮೂಲದ ಮಹಿಳೆಯೊಬ್ಬರಿಗೆ ಸೇರಿದ ₹4.80 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ಇತರ ವಸ್ತುಗಳಿದ್ದ ಬ್ಯಾಗ್ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕಳವಾಗಿರುವ ಕುರಿತು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ನಿವಾಸಿ ಪದ್ಮಜಾ ಅವರು ಬ್ಯಾಗ್ ಕಳೆದುಕೊಂಡ ಮಹಿಳೆ ಎಂದು ಗುರುತಿಸಲಾಗಿದೆ.
ಮಂಗಳೂರಿಗೆ ಬಂದಿದ್ದ ಅವರು ವಸತಿಗೃಹದಲ್ಲಿ ತಂಗಿದ್ದರು. ಜ. 23ರಂದು ಅವರ ಪತಿ ಬ್ರಹ್ಮಾವರಕ್ಕೆ ಹೋಗಿದ್ದು, ಪದ್ಮಜಾ ಸಂಬಂಧಿಯೊಬ್ಬರ ಜತೆಗೆ ಬೆಳಗ್ಗೆ 8 ಗಂಟೆಗೆ ಮಂಗಳೂರು ಆಸುಪಾಸಿನ ವಿವಿಧ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರು. ವಸತಿಗೃಹದಿಂದ ಹೋಗುವಾಗ ಚಿನ್ನಾಭರಣಗಳನ್ನು ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಆಟೋರಿಕ್ಷಾ ಬಾಡಿಗೆಗೆ ಮಾಡಿಕೊಂಡು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಸತಿಗೃಹಕ್ಕೆ ಮರಳಿ ಬಂದಿದ್ದರು.
ರಾತ್ರಿ ಊರಿಗೆ ತೆರಳಲು ಉದ್ದೇಶಿಸಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಟ್ರಾಲಿ ಬ್ಯಾಗ್‌ನಲ್ಲಿಟ್ಟಿದ್ದರು. ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವ 5ನೇ ಪ್ಲಾಟ್ ಫಾರಂಗೆ ಬಂದು ರಾತ್ರಿ 7 ಗಂಟೆಗೆ ಬೆಂಗಳೂರು ಬಸ್ ಹತ್ತಿದ್ದರು. ಬಸ್‌ನ ಕ್ಯಾಬಿನ್‌ನಲ್ಲಿ ಟ್ರಾಲಿ ಬ್ಯಾಗನ್ನು ಇಟ್ಟು ಕುಳಿತುಕೊಂಡಿದ್ದರು. ರಾತ್ರಿ 7.15ಕ್ಕೆ ನಿಲ್ದಾಣದಿಂದ ಹೊರಟು ಸ್ವಲ್ಪ ದೂರ ಹೋದಾಗ ಟ್ರಾಲಿ ಬ್ಯಾಗ್ ಇಟ್ಟ ಸ್ಥಳದಲ್ಲಿ ಕಾಣಿಸಲಿಲ್ಲ. ಬಸ್ಸಿನಲ್ಲಿ ಎಲ್ಲ ಕಡೆ ಹುಡುಕಾಡಿದರೂ ಬ್ಯಾಗ್ ಪತ್ತೆಯಾಗಿಲ್ಲ. ಬಸ್ ನಿಲ್ಲಿಸಿ ವಾಪಾಸು ನಿಲ್ದಾಣ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ.
ಬ್ಯಾಗ್ ನಲ್ಲಿ 20 ಸಾವಿರ ರೂ. ನಗದು, 1.80 ಲಕ್ಷ ರೂ. ಮೌಲ್ಯದ 18 ಗ್ರಾಂ ತೂಕದ ಎರಡು ಚಿನ್ನದ ಬಳೆ, 1.80 ಲಕ್ಷ ರೂ. ಮೌಲ್ಯದ 18 ಗ್ರಾಂ ತೂಕದ ಚಿನ್ನದ ಚೈನ್, 60 ಸಾವಿರ ರೂ. ಮೌಲ್ಯದ 6 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 30 ಸಾವಿರ ರೂ. ಮೌಲ್ಯದ 3 ಗ್ರಾಂ. ಚಿನ್ನದ ಉಂಗುರ ಸೇರಿ ಒಟ್ಟು 45 ಗ್ರಾಂ ಚಿನ್ನಾಭರಣವಿತ್ತು. ಕಳವಾದ ನಗದು, ಚಿನ್ನಾಭರಣ ಮತ್ತು ವಸ್ತುಗಳ ಒಟ್ಟು ಮೊತ್ತ 4.80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಬಳಿಕ ಬರ್ಕೆ ಠಾಣೆಗೆ ತೆರಳಿ ದೂರ ನೀಡಿದ್ದಾರೆ.






