ಮಂಗಳೂರು ಜ. 27 : ಉಳ್ಳಾಲ ವಲಯ ನಾಡದೋಣಿ ಹಾಗೂ ಗಿಲ್‌ನೆಟ್ ಮೀನುಗಾರರ ಸಂಘದ ಮುಂದಾಳತ್ವದಲ್ಲಿ ನಿರ್ಮಿಸಲಾದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ “ಬೋಟ್ ಆಂಬ್ಯುಲೆನ್ಸ್”ಗೆ ಸೋಮವಾರ ಜಪ್ಪಿನಮೊಗೇರು ನದಿ ತಟದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಮೀನುಗಾರರ ಪ್ರಾಣರಕ್ಷಣೆ ಹಾಗೂ ತುರ್ತು ಸಂದರ್ಭಗಳಲ್ಲಿ ವೇಗವಾದ ನೆರವು ಒದಗಿಸುವ ದೃಷ್ಟಿಯಿಂದ ಈ ಬೋಟ್ ಆಂಬ್ಯುಲೆನ್ಸ್ ಸೇವೆ ಅತ್ಯಂತ ಉಪಯುಕ್ತವಾಗಲಿದೆ.
ಮೀನುಗಾರರೇ ಯೋಜನೆ ರೂಪಿಸಿ ಇದನ್ನು ಕಾರ್ಯಗತಗೊಳಿಸಿದ್ದು, ಈ ಮಾದರಿ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರಕ್ಕೆ ಪ್ರೇರಣೆ ಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿ, ಸಮುದ್ರದಲ್ಲಿ ಅಪಾಯದಲ್ಲಿರುವವರ ರಕ್ಷಣಾ ಕಾರ್ಯ ದೇವರ ಕೆಲಸ. ಈ ಸೇವೆಗೆ ಇನ್ನಷ್ಟು ಶಕ್ತಿ ಸಿಗಲಿ. ಮೀನುಗಾರರ ಆರ್ಥಿಕ ಬದುಕು ಭದ್ರವಾಗಲಿ ಎಂದು ಹೇಳಿದರು.
ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಸೋಲಾರ್‌ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಮದನಿ ದರ್ಗಾದ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಸ್ವಾಗತಿಸಿದರು. ಮೋಹನ್ ಶಿರ್ಲಾಲ್ ನಿರೂಪಿಸಿದರು.
ನದಿಯಲ್ಲೇ ಧ್ವಜಾರೋಹಣ!
ನದಿತಟದಲ್ಲಿ “ಬೋಟ್ ಆಯಂಬುಲೆನ್ಸ್’ ಲೋಕಾರ್ಪಣೆ ಗೊಳಿಸಿದ ಖಾದರ್, ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರು ಅದೇ ಬೋಟ್‌ನಲ್ಲಿ ನದಿಯಲ್ಲಿ ಸಂಚರಿಸಿದರು. ಗಣರಾಜ್ಯೋತ್ಸವ ದಂಗವಾಗಿ ನದಿಯ ಮಧ್ಯೆ ಧ್ವಜಾರೋಹಣ ನೆರವೇರಿಸಿ ಗಮನ ಸೆಳೆದರು.
ಏನಿದು ಬೋಟ್ ಆಯಂಬುಲೆನ್ಸ್?
ನದಿ ಅಥವಾ ಸಮುದ್ರದಲ್ಲಿ ಮೀನುಗಾರಿಕೆ ಸಂದರ್ಭ ಅವಘಡ ಸಂಭವಿಸಿದರೆ ತುರ್ತು ರಕ್ಷಣೆಗಾಗಿ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘದಿಂದ ತಯಾರಿಸಲಾಗಿರುವ ಪ್ರಥಮ ಬೋಟ್ ಆಯಂಬುಲೆನ್ಸ್ ಇದಾಗಿದೆ.
ಸರಕಾರದಿಂದಲೇ ಬೋಟ್ ಆಯಂಬುಲೆನ್ಸ್ ಆರಂಭಿಸುವ ಬಗ್ಗೆ ಮೊದಲು ಹೇಳಲಾಗುತ್ತಿತ್ತು. ಆದರೆ ಅದು ಕೈಗೂಡಲೇ ಇಲ್ಲ. ಈಗ ಮೀನುಗಾರರೇ ನಿರ್ಮಿಸಿದ್ದಾರೆ. 30 ಜನರು ಪ್ರಯಾಣಿಸುವಷ್ಟು ಅವಕಾಶ ಇದ್ದು ತುರ್ತು ಸಂದರ್ಭದಲ್ಲಿ ಮೀನುಗಾರರ ಜೀವರಕ್ಷಣೆಗೆ ಮಾತ್ರ ಬಳಸಲಾಗುತ್ತದೆ.
ಮೀನುಗಾರಿಕೆ ಸಂದರ್ಭ ಅವಘಡ ಸಂಭವಿಸಿದರೆ, ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದರೆ ತಕ್ಷಣವೇ ಈ ಬೋಟ್ ಆಯಂಬುಲೆನ್ಸ್ ಸೇವೆ ನೀಡಲಿದ್ದು ಉಳ್ಳಾಲ ಜೆಟ್ಟಿಯನ್ನು ಕೇಂದ್ರವಾಗಿರಿಸಿ ಕಾರ್ಯಾಚರಿಸಲಿದೆ. ಇದಕ್ಕಾಗಿ ಚಾಲಕರ ಸಹಿತ 15 ಮಂದಿ ನುರಿತರ ತಂಡ ಸಜ್ಜಾಗಿದೆ. ಸೈರನ್, ಎಮರ್ಜೆನ್ಸಿ ಕೆಂಪು ದೀಪ, ಸಂಚರ್, ಆಮ್ಲಜನಕ, ವೈದ್ಯಕೀಯ ಉಪಕರಣಗಳು, ಲೈಫ್ ಜಾಕೆಟ್, ನುರಿತ ಆರೋಗ್ಯ ಸಿಬಂದಿ ಇರಲಿದ್ದಾರೆ.






