ನವದೆಹಲಿ: ಜನವರಿ 21:ಭಾರತೀಯ ಮೂಲದ ಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು 27 ವರ್ಷಗಳ ಸುದೀರ್ಘ ಸೇವೆ ಬಳಿಕ ನಾಸಾದಿಂದ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಮೂರು ಪ್ರಮುಖ ಬಾಹ್ಯಾಕಾಶ ಯಾತ್ರೆಗಳನ್ನು ಪೂರ್ಣಗೊಳಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ 27 ವರ್ಷಗಳ ಕಾಲ ಅಪೂರ್ವ ಹಾಗೂ ಪ್ರೇರಣಾದಾಯಕ ವೃತ್ತಿಜೀವನವನ್ನು ನಡೆಸಿದ ಖ್ಯಾತ ಗಗನಯಾತ್ರಿ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರು ನಿವೃತ್ತಿಯಾಗಿರುವ ಬಗ್ಗೆ ನಾಸಾ ಅಧಿಕೃತವಾಗಿ ಘೋಷಿಸಿದೆ. ಅವರ ನಿವೃತ್ತಿ 2025ರ ಡಿಸೆಂಬರ್ 27ರಿಂದ ಜಾರಿಗೆ ಬಂದಿದೆ ನಾಸಾ ಬುಧವಾರ (ಅಮೆರಿಕದಲ್ಲಿ ಮಂಗಳವಾರ) ಪ್ರಕಟಣೆ ಹೊರಡಿಸಿದೆ.
ಪ್ರಸ್ತುತ 60 ವರ್ಷ ವಯಸ್ಸಿನ ಸುನೀತಾ ವಿಲಿಯಮ್ಸ್, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಮೂರು ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮಾನವ ಬಾಹ್ಯಾಕಾಶ ಹಾರಾಟದ ಇತಿಹಾಸದಲ್ಲಿ ಅನೇಕ ಮಹತ್ವದ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.






