ಉಡುಪಿ : ಜನವರಿ 21:ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಮಠದ ಗೌರವವನ್ನು ಕಾಪಾಡುವ ಉದ್ದೇಶದಿಂದ ಉಡುಪಿ
ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಇನ್ನು ಮುಂದೆ ಸಾಂಪ್ರದಾಯಿಕ ವಸ್ತ್ರ ಧಾರಣೆ ಕಡ್ಡಾಯವಾಗಲಿದೆ.
ಹೊಸ ವಸ್ತ್ರ ಸಂಹಿತೆಯ ಪ್ರಕಾರ ಪುರುಷ ಭಕ್ತರು ಅಂಗಿ ಇಲ್ಲದೆ, ಬನಿಯನ್, ಬರ್ಮುಡಾ, ಟೈಟ್ ಅಥವಾ ಅಸಂಯಮಿತ ಉಡುಗೆ ಧರಿಸಿ ಮಠ ಪ್ರವೇಶಿಸುವಂತಿಲ್ಲ.
ಮಹಿಳಾ ಭಕ್ತರು ಶಾರ್ಟ್ಸ್, ಟೈಟ್ ಪ್ಯಾಂಟ್ ಅಥವಾ ಸಾಂಪ್ರದಾಯಿಕತೆಗೆ ವಿರುದ್ಧವಾದ ಉಡುಗೆಯಲ್ಲಿ ಮಠ ಪ್ರವೇಶಿಸಲು ಅವಕಾಶ ಇರುವುದಿಲ್ಲ.
ಭಕ್ತರು ಧೋತಿ, ಪಂಚೆ, ಸೀರೆ, ಸಲ್ವಾರ್-ಕಮೀಜ್ ಮೊದಲಾದ ಸಂಪ್ರದಾಯಬದ್ಧ ಹಾಗೂ ಗೌರವಪೂರ್ಣ ವಸ್ತ್ರಗಳನ್ನು ಧರಿಸಬೇಕು ಎಂದು ಮಠ ಆಡಳಿತ ಸೂಚಿಸಿದೆ.
ಈ ಕ್ರಮದಿಂದ ಮಠದ ಧಾರ್ಮಿಕ ಪಾವಿತ್ರ್ಯ ಮತ್ತು ಶಿಷ್ಟಾಚಾರ ಕಾಪಾಡಲು ಸಹಕಾರಿಯಾಗಲಿದೆ ಎಂದು ಮಠದ ವಲಯಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಇತರ ಪ್ರಮುಖ ದೇವಸ್ಥಾನಗಳಂತೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿಯೂ ಈ ವಸ್ತ್ರ ಸಂಹಿತೆ ಭಕ್ತರ ನಡುವೆ ಸಂಸ್ಕೃತಿ ಅರಿವು ಮೂಡಿಸಲಿದೆ ಎಂಬ ನಿರೀಕ್ಷೆ ಇದೆ.
ಮುಂದಿನ ದಿನಗಳಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಮಠ ಆಡಳಿತ ಸ್ಪಷ್ಟಪಡಿಸಿದೆ.






