ಮಂಗಳೂರು : ಜನವರಿ 13:ಶಬರಿಮಲೆ ಯಾತ್ರೆ ಕೈಗೊಂಡಿದ್ದ ಉಳ್ಳಾಲ ತಾಲೂಕಿನ ಅಯ್ಯಪ್ಪ ಮಾಲಾದಾರಿ ಕೇರಳದ ಎರಿಮಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದ ಘಟನೆ ಜನವರಿ 12ರ ಬೆಳಿಗ್ಗೆ ನಡೆದಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ದೇಲಂತಬೆಟ್ಟು ನಿವಾಸಿ ಉದ್ಯಮಿ ಚಂದ್ರಹಾಸ್ ಶೆಟ್ಟಿ (55) ಮೃತಪಟ್ಟವರು ಎನ್ನಲಾಗಿದ್ದು ಅವರು ಇತರ ಅಯ್ಯಪ್ಪ ಮಾಲಾ ವೃತಧಾರಿಗಳ ಜೊತೆ ಶನಿವಾರದಂದು ನಗರದ ಅರ್ಕುಳ, ತುಪ್ಪೇಕಲ್ಲಿನಿಂದ ಶಬರಿಮಲೆ ಯಾತ್ರೆ ಕೈಗೊಂಡಿದ್ದರು.
ಸೋಮವಾರ ಬೆಳಿಗ್ಗೆ ಚಂದ್ರಹಾಸ್ ಅವರು ಎರಿಮಲೆಯಿಂದ ಕಾಡಿನ ದಾರಿಯಾಗಿ ಪಂಪೆಗೆ ಪ್ರಯಾಣ ಬೆಳೆಸಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಚಂದ್ರಹಾಸ್ ಅವರು ಮೂಲತ: ಬಾಕ್ರಬೈಲ್ ನಿವಾಸಿಯಾಗಿದ್ದು, ಮಿನರಲ್ ವಾಟರ್ ಪೂರೈಕೆಯ ಉದ್ಯಮ ನಡೆಸುತ್ತಿದ್ದರು. ಕಳೆದ ಹತ್ತು ವರುಷದ ಹಿಂದೆ ಪಿಲಾರಿನಲ್ಲೇ ಮನೆ ನಿರ್ಮಿಸಿ ವಾಸವಾಗಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.






