ಬೆಂಗಳೂರು: ಜನವರಿ 13:ರಾಜ್ಯದಲ್ಲಿ ಸುಮಾರು 2.5 ರಿಂದ 3 ಲಕ್ಷ ಹೊಸ ಪಡಿತರ ಚೀಟಿಗಳನ್ನು ಮುಂದಿನ ಒಂದೆರಡು ತಿಂಗಳಲ್ಲಿ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಕಲಬುರಗಿಯಲ್ಲಿ ಹೇಳಿದರು.
ಇದೇ ವೇಳೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ ಆರಂಭ ಆಗಲಿದೆ ಎನ್ನುವ ಮಾಹಿತಿಯನ್ನು ಸಹ ನೀಡಿದ್ದಾರೆ.
ಪರಿಷ್ಕರಣೆ ಸೇರಿ ಹಲವು ಕಾರಣಗಳಿಂದ ಕಳೆದ ಎರಡೂವರೆ ವರ್ಷದಿಂದ ಹೊಸ ಪಡಿತರ ಚೀಟಿ ನೀಡಲು ಸಾಧ್ಯ ಆಗಿಲ್ಲ. ಸುಮಾರು 2.5 ಲಕ್ಷದಿಂದ 3ಲಕ್ಷ ಅರ್ಜಿಗಳು ಸದ್ಯ ಬಾಕಿ ಇರುವ ಬಗ್ಗೆ ಮಾಹಿತಿಯಿದೆ. ಎಲ್ಲವೂ ಪರಿಶೀಲನೆ ಮಾಡಿ ಹೊಸ ಪಡಿತರ ಚೀಟಿಗಳನ್ನು ಶೀಘ್ರದಲ್ಲೇ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ ಆರಂಭ?: ಇದೇ ವೇಳೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೆ ಯಾವಾಗ ಅವಕಾಶ ಕಲ್ಪಿಸಲಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡಿದವರಿಗೆ ಪಡಿತ ವಿತರಣೆ ಮಾಡಲಾಗುತ್ತದೆ. ಇದು ಪ್ರಕ್ರಿಯೆ ಜನವರಿ ಅಂತ್ಯದೊಳಗೆ ಮುಗಿಯಲಿದ್ದು, ಮುಂದಿನ ತಿಂಗಳು ಫೆಭ್ರವರಿಯಿಂದ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.






