ಉಡುಪಿ: ಜನವರಿ 07: ರೋಡ್ ಸೇಫ್ಟಿ ಅಥಾರಿಟಿ ನಿರ್ಧಾರ ಪ್ರಕಾರ 6 ಚಕ್ರ ಮತ್ತು ಅದಕ್ಕಿಂತ ಜಾಸ್ತಿ ಇರುವಂತಹ MMRD ಕಾಯ್ದೆ ಅಡಿಯಲ್ಲಿ ಬರುವ (ಕೆಂಪು ಕಲ್ಲು, ಹೋಯ್ಲೆ, ಎಂ ಸ್ಯಾಂಡ್ ಇತ್ಯಾದಿ) ಸಾಗಾಟ ಮಾಡುವಂತಹ ವಾಹನಗಳು ಕಡ್ಡಾಯವಾಗಿ ಸ್ಪೀಡ್ ಗವರ್ನರ್ (60 km ಪರ್ ಅವರ್) ಅಳವಡಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಲ್ಲಿ ಅತಿ ವೇಗದ ಚಾಲನೆಗೆ ಕಡಿವಾಣ ಹಾಕಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಲಾರಿಗಳಿಗೆ ‘ಸ್ಪೀಡ್ ಗವರ್ನರ್’ (ವೇಗ ನಿಯಂತ್ರಕ) ಕಡ್ಡಾಯವಾಗಿ ಅಳವಡಿಸುವ ಕುರಿತು ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಗಣಿಗಾರಿಕೆ ಸಂಬಂಧಿಸಿ ಮರಳು ಮಣ್ಣು ಕಲ್ಲು ಸೇರಿದಂತೆ ಖನಿಜಗಳನ್ನು ಸಾಗಿಸುವ ಆರು ಚಕ್ರದ ಹಾಗೂ ಅದಕ್ಕಿಂತ ಹೆಚ್ಚಿನ ಚಕ್ರಗಳ ವಾಹನಗಳಿಗೆ ಗರಿಷ್ಠ 60 ಕಿ.ಮೀ. ವೇಗ ಮಿತಿಯ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಟಿಪ್ಪರ್‌ಗಳು ಮತ್ತು ಭಾರೀ ವಾಹನಗಳ ಅತಿ ವೇಗದ ಚಾಲನೆಯ ಬಗ್ಗೆ ಇತ್ತೀಚೆಗೆ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಎಸ್‌ಪಿ ಅವರು ತಿಳಿಸಿದ್ದಾರೆ.
ಮುಂದಿನ 10 ದಿನಗಳ ಒಳಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸದಿದ್ದಲ್ಲಿ ಜಿಲ್ಲೆಯಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಎಂದು ಎಚ್ಚರಿಕೆ ನೀಡಿದ್ದಾರೆ







