ಬೆಂಗಳೂರು, 7 ಜನವರಿ 2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್, ಹೈದರಾಬಾದ್‌ನ ಎನ್ಎಸ್ಐಸಿ ತಾಂತ್ರಿಕ ಸೇವಾ ಕೇಂದ್ರದಲ್ಲಿ ತನ್ನ ‘ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್’ (ಎಸ್ಐಸಿ) ಯೋಜನೆಯಡಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕೋಡಿಂಗ್ ಹಾಗೂ ಪ್ರೋಗ್ರಾಮಿಂಗ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ 450 ಮಂದಿಗೆ ಪ್ರಮಾಣಪತ್ರಗಳನ್ನು ವಿತರಿಸಿದೆ. ಈ ಮೂಲಕ ಸ್ಯಾಮ್‌ಸಂಗ್ ಭಾರತದಲ್ಲಿ ಭವಿಷ್ಯ ಸಿದ್ಧ ಮತ್ತು ಡಿಜಿಟಲ್ ಸಿದ್ಧ ಕಾರ್ಯಪಡೆಯನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ಸಾರಿದೆ.
ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಎಂಬುದು ಯುವಜನತೆಗೆ ಸುಧಾರಿತ ಮತ್ತು ಉದ್ಯಮಕ್ಕೆ ಅಗತ್ಯವಾದ ತಂತ್ರಜ್ಞಾನ ಕೌಶಲಗಳನ್ನು ಕಲಿಸುವ ಜಾಗತಿಕ ಯೋಜನೆಯಾಗಿದ್ದು, ಇದು ವ್ಯವಸ್ಥಿತ ತರಬೇತಿ ಮತ್ತು ಪ್ರಾಯೋಗಿಕ ಕಲಿಕೆಯ ಮೂಲಕ ಯುವಜನತೆಯ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿ ಹೊಂದಿದೆ.
*ಭವಿಷ್ಯದ ತಂತ್ರಜ್ಞಾನ ಕೌಶಲಗಳ ಕೇಂದ್ರವಾಗಿ ಹೊರಹೊಮ್ಮಿದ ಹೈದರಾಬಾದ್*
ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಹೈದರಾಬಾದ್ ಎನ್ಎಸ್ಐಸಿ ಕೇಂದ್ರದ ಮುಖ್ಯಸ್ಥರಾದ ಶ್ರೀ ರಾಜೀವ್‌ನಾಥ್ ಅವರು ಪಾಲ್ಗೊಂಡು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಭಾರತದ ಡಿಜಿಟಲ್ ರೂಪಾಂತರಕ್ಕೆ ಯುವಕರ ಕೌಶಲ ಅಭಿವೃದ್ಧಿಗೆ ಹೂಡಿಕೆ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಅವರು ಒತ್ತಿಹೇಳಿದರು.
ಈ ವರ್ಷ ಹೈದರಾಬಾದ್‌ನಲ್ಲಿ ತರಬೇತಿ ಪಡೆದ 450 ವಿದ್ಯಾರ್ಥಿಗಳಲ್ಲಿ, 100 ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (ಎಐ) ವಿಷಯದಲ್ಲಿ ಸುಧಾರಿತ ತರಬೇತಿ ಪಡೆದರೆ, 350 ವಿದ್ಯಾರ್ಥಿಗಳು ಉದ್ಯಮಕ್ಕೆ ಪೂರಕವಾದ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
*ಭಾರತದ ಭವಿಷ್ಯದ ಕಾರ್ಯಪಡೆಗೆ ಬಲ*
ಹೈದರಾಬಾದ್‌ನ ಈ ಯೋಜನೆಯು 2025ರ ವೇಳೆಗೆ ಭಾರತದಾದ್ಯಂತ 20,000 ಯುವಕರಿಗೆ ಕೌಶಲ ಒದಗಿಸುವ ಸ್ಯಾಮ್‌ಸಂಗ್‌ನ ಬೃಹತ್ ಯೋಜನೆಯ ಭಾಗವಾಗಿದ್ದು, ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ’ ಮತ್ತು ‘ಡಿಜಿಟಲ್ ಇಂಡಿಯಾ’ ಅಭಿಯಾನಗಳಿಗೆ ಪೂರಕವಾಗಿದೆ. ಈ ಎಸ್ಐಸಿ ಯೋಜನೆಯು ದೇಶದಲ್ಲಿ ತಂತ್ರಜ್ಞಾನ ಆಧಾರಿತ ಆವಿಷ್ಕಾರ ವ್ಯವಸ್ಥೆಯನ್ನು ರೂಪಿಸುವ ಗುರಿ ಹೊಂದಿದೆ.
ಈ ಕಾರ್ಯಕ್ರಮವು ಎಲ್ಲರ ಒಳಗೊಳ್ಳುವಿಕೆಗೆ ಹೆಚ್ಚಿನ ಒತ್ತು ನೀಡುತ್ತದೆ. ರಾಷ್ಟ್ರಮಟ್ಟದಲ್ಲಿ ಇದರಲ್ಲಿ ಶೇ. 42 ರಷ್ಟು ಮಹಿಳೆಯರು ಭಾಗವಹಿಸಿದ್ದಾರೆ. ಅಲ್ಲದೆ, 2ನೇ ಮತ್ತು 3ನೇ ಹಂತದ ನಗರಗಳು ಹಾಗೂ ಸಣ್ಣ ನಗರ ಪ್ರದೇಶಗಳಿಗೂ ಈ ಉನ್ನತ ಗುಣಮಟ್ಟದ ತಂತ್ರಜ್ಞಾನ ಶಿಕ್ಷಣ ತಲುಪುವಂತೆ ನೋಡಿಕೊಳ್ಳಲಾಗಿದೆ.
ಬೇಡಿಕೆಯಲ್ಲಿರುವ ಡಿಜಿಟಲ್ ಕೌಶಲಗಳನ್ನು ಕಲಿಸುವ ಮೂಲಕ, ಉದ್ಯೋಗ ಸಿದ್ಧ ಪ್ರತಿಭೆಗಳನ್ನು ರೂಪಿಸುವ ಮೂಲಕ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಭವಿಷ್ಯ ಸಿದ್ಧ ಪ್ರತಿಭಾ ವಲಯವನ್ನು ರೂಪಿಸುವಲ್ಲಿ ಮತ್ತು ಭಾರತವನ್ನು ಡಿಜಿಟಲ್ ಸಬಲ ಆರ್ಥಿಕತೆಯನ್ನಾಗಿ ಮಾಡುವ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.






