ಕೊಣಾಜೆ : ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳು ವಿಭಾಗದ ಅಭಿವೃದ್ಧಿಗೆ ಹಾಗೂ ವಿಶ್ವವಿದ್ಯಾನಿಲಯಕ್ಕೆ ಅನೇಕ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಮತ್ತು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನವನ್ನು ಪಡೆದಿರುವುದು ಇಡೀ ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಪಿ. ಎಲ್. ಧರ್ಮ ರವರು ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳ ಆಲೂಮ್ನಿ ಮೀಟ್- ಸಮನ್ವಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ವಿಭಾಗದೊಂದಿಗೆ ತಮ್ಮ ಉತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗಬೇಕು ಹಾಗೂ ವಿಭಾಗದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರಸ್ತುತ ವಾಣಿಜ್ಯ ಕ್ಷೇತ್ರವು ಸಂಶೋಧನೆ, ವ್ಯವಹಾರ, ಪ್ರವಾಸೋದ್ಯಮ, ಕೈಗಾರಿಕೆ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಎಂ. ಪಿ. ಸುಬ್ರಹ್ಮಣ್ಯರವರು ಮಾತನಾಡುತ್ತಾ ಉನ್ನತ ಶಿಕ್ಷಣವು ಸಂಶೋಧನೆಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕು ಎಂದು ನುಡಿದರು.
ಹಿರಿಯ ಪ್ರಾಧ್ಯಾಪಕರಾದ ಪ್ರೊ. ಉದಯ ಕುಮಾರ್, ಪ್ರೊ. ಪ್ರಕಾಶ್ ಪಿಂಟೊ, ಪ್ರೊ. ಶ್ರೀಧರ್ ಮಣಿಯಾಣಿ, ಪ್ರೊ. ಉಮ್ಮಪ್ಪ ಪೂಜಾರಿ, ಪ್ರೊ. ರಾಜಶೇಖರ್ ಹೆಬ್ಬಾರ್, ಪ್ರೊ. ಮಲ್ಲಿಕಾರ್ಜುನಪ್ಪ, ಪ್ರೊ. ವೈ. ಮುನಿರಾಜು, ಡಾ. ಸುಭಾಷಿನಿ ಶ್ರೀವತ್ಸ ಮತ್ತು ‘ಮಾ’ ಸಂಘದ ಗೌರವಾಧ್ಯಕ್ಷರಾದ ದಿನೇಶ್ ಕುಮಾರ್ ಆಳ್ವರವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ. ಎಲ್. ಧರ್ಮ, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಎಂ. ಪಿ. ಸುಬ್ರಹ್ಮಣ್ಯ ಹಾಗೂ ಪ್ರೊ. ಮಲ್ಲಿಕಾರ್ಜುನಪ್ಪರವರನ್ನು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜಾ ಪ್ರಾಸ್ತಾವಿಸಿ, ಸ್ವಾಗತಿಸಿದರು. ‘ಅಮಕಾ’ದ ಉಪಾಧ್ಯಕ್ಷರಾದ ಮಧುಸೂದನ್ ಭಟ್ ವಂದಿಸಿದರು. ವಿದ್ಯಾರ್ಥಿಗಳಾದ ಮೋಕ್ಷಿತ ಎಂ. ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ರೋಷಿಣಿ ಯಶವಂತ್ ಗೈದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.






