ಉಡುಪಿ: ನವೆಂಬರ್ 27:ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ‘ವಿಶ್ವ ಗೀತಾ ಪರ್ಯಾಯ’ದ ವಿಶಿಷ್ಟ ಕಾರ್ಯಕ್ರಮವಾಗಿ ನ.28ರಂದು ಉಡುಪಿ ರಾಜಾoಗಣದ ಪಾರ್ಕಿಂಗ್ ಸ್ಥಳದ ಬಳಿ ನಡೆಯಲಿರುವ ‘ಲಕ್ಷ ಕಂಠ ಗೀತೋತ್ಸವ’ದ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿಶ್ವ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಭಗವದ್ಗೀತೆಯ 15ನೇ ಅಧ್ಯಾಯವನ್ನು ನೆರೆದ ಎಲ್ಲರೊಂದಿಗೆ ಸಾಮೂಹಿಕ ಪಠಣ ಮಾಡಲಿದ್ದಾರೆ. ಈ ಅಪೂರ್ವ ಕ್ಷಣಗಳಲ್ಲಿ ಶ್ರೀ ಕೃಷ್ಣ ಭಕ್ತರು, ಸಮಸ್ತ ಭಜನಾ ಮಂಡಳಿಗಳ ಸದಸ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಹಿತ ಜಿಲ್ಲೆಯ ಮಹಾ ಜನತೆ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ, ‘ಲಕ್ಷ ಕಂಠ ಗೀತೋತ್ಸವ’ವನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀ ಮಠದ ದಿವಾನ ನಾಗರಾಜ ಆಚಾರ್ಯ ಕರೆ ನೀಡಿದರು.
ಅವರು ಶ್ರೀ ಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ಪೂರ್ವಸಿದ್ದತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಲಕ್ಷ ಕಂಠ ಗೀತೋತ್ಸವ ಸಮಿತಿಯ ಪ್ರಮುಖರಾದ ವಿಕ್ರಂ ಕುಂಟಾರು ನ.28ರ ಕಾರ್ಯಕ್ರಮದ ಕುರಿತು ವಿಸ್ತ್ರತ ಮಾಹಿತಿ ನೀಡಿ, ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಳ್ಳುವವರು ನ.28ರಂದು ಬೆಳಿಗ್ಗೆ 9.00 ಗಂಟೆಗೆ ಸಮವಸ್ತ್ರ ಹಾಗೂ ನಿಗದಿತ ಪಾಸ್ ನೊಂದಿಗೆ ಪಾರಾಯಣದ ಸ್ಥಳದಲ್ಲಿ ಉಪಸ್ಥಿತರಿರುವಂತೆ ಕೋರಿದರು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಮಾತನಾಡಿ, ಶ್ರೀ ಮಠದ ವತಿಯಿಂದ ನ.28ರಂದು ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಮತ್ತು ನ.30ರಂದು ನಡೆಯುವ ಭಜನೋತ್ಸವದ ಬಗ್ಗೆ ಭಜನಾ ಪರಿಷತ್ ಕೇಂದ್ರ ಸಮಿತಿಯ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಅನೇಕ ಕಡೆಗಳಲ್ಲಿ ತರಬೇತಿಗಳು ಯಶಸ್ವಿಯಾಗಿ ನಡೆದಿವೆ. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸಮಸ್ತ ಭಜನಾ ಮಂಡಳಿಗಳ ಸದಸ್ಯರು ಮತ್ತು ಭಜಕರು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದಿವ್ಯಾನುಗ್ರಹಕ್ಕೆ ಪಾತ್ರರಾಗಬೇಕು ಎಂದು ವಿನಂತಿಸಿದರು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರ ಮಹತ್ವಾಕಾಂಕ್ಷೆಯಂತೆ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಯೋಜನೆಯ ಸಂಪೂರ್ಣ ಸಹಕಾರವಿದೆ. ಎಲ್ಲರೂ ಸಂಘಟಿತರಾಗಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಲಕ್ಷ ಕಂಠ ಗೀತಾ ಪಾರಾಯಣ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಲಕ್ಷ ಕಂಠ ಗೀತಾ ಪಾರಾಯಣದ ಮುಖ್ಯಸ್ಥೆ ವಿದುಷಿ ಉಷಾ ಹೆಬ್ಬಾರ್, ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸಹಿತ ವಲಯಗಳ ಸಂಚಾಲಕರು, ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಗೂ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು, ಸದಸ್ಯರು, ಭಜಕರು ಉಪಸ್ಥಿತರಿದ್ದರು.








