ಉಡುಪಿ: ನವೆಂಬರ್ 27: ಪ್ರಧಾನಿ ಮೋದಿಯವರ ಆಗಮನಕ್ಕಾಗಿ ಉಡುಪಿ ನಗರ ಸರ್ವಸನ್ನದ್ಧವಾಗಿದೆ.
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದಲ್ಲಿ ನ.28ರಂದು ನಡೆಯುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ನ. 28ರ ಬೆಳಗ್ಗೆ 11.05ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಉಡುಪಿಯ ಆದಿಉಡುಪಿ ಹೆಲಿಪ್ಯಾಡ್‌ಗೆ 11.35ಕ್ಕೆ ಬರಲಿದ್ದಾರೆ.
ಬನ್ನಂಜೆಯ ನಾರಾಯಣಗುರು ವೃತ್ತದಿಂದ ಕಲ್ಸಂಕದವರೆಗೆ ಬೃಹತ್ ರೋಡ್ ಶೋ ಮೂಲಕ ಶ್ರೀ ಕೃಷ್ಣಮಠಕ್ಕೆ ಮಧ್ಯಾಹ್ನ 12 ಗಂಟೆಗೆ ಆಗಮಿಸಲಿದ್ದಾರೆ.
ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದು ಅನಂತರ ಗೀತಾಮಂದಿರಕ್ಕೆ ಭೇಟಿ ನೀಡಿ, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಿ ಪಾರ್ಕಿಂಗ್ ಪ್ರದೇಶದ ಸಮೀಪದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬನ್ನಂಜೆಯಿಂದ ಕಲ್ಸಂಕದವರೆಗೆ ಪ್ರಧಾನಿ ಮೋದಿ ಅವರ ರೋಡ್ ಶೋ ಇರುವುದರಿಂದ ಈ ಮಾರ್ಗದಲ್ಲಿ ಎರಡೂ ಕಡೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಬೆಳಗ್ಗೆ 11.35ಕ್ಕೆ ಆದಿಉಡುಪಿ ಹೆಲಿಪ್ಯಾಡ್‌ಗೆ ಮೋದಿಯವರು ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಶ್ರೀ ಮಠಕ್ಕೆ ಬರಲಿದ್ದಾರೆ. ಈ ವೇಳೆ ಬನ್ನಂಜೆಯಿಂದ ಕಲ್ಸಂಕದವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದಕ್ಕಾಗಿ ಬನ್ನಂಜೆ ಶ್ರೀ ನಾರಾಯಣ ಗುರು ಮಂದಿರದ ಸಮೀಪ, ಜಯಲಕ್ಷ್ಮೀ ಸಿಲ್ಕ್ಸ್ ಸಮೀಪ ಹಾಗೂ ಸಿಟಿ ಬಸ್ ನಿಲ್ದಾಣ ಸಮೀಪದಲ್ಲಿ ವೇದಿಕೆ ನಿರ್ಮಿಸಿ ಯಕ್ಷಗಾನ, ಹುಲಿವೇಷ ಹಾಗೂ ಕೃಷ್ಣವೇಷ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ಮೋದಿಯವರಿಗೆ ಈ ವೇಳೆ ಪುಷ್ಪಾರ್ಚನೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರು ಉಡುಪಿ ಶ್ರೀ ಕೃಷ್ಣಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನ.28ರ ಬೆಳಗ್ಗೆ 8ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಶ್ರೀ ಕೃಷ್ಣ ಮಠದಲ್ಲಿ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಈ ಅವಧಿಯಲ್ಲಿ ದೇವಸ್ಥಾನದ ಒಳಗೆ ಭಕ್ತರ ಪ್ರವೇಶಕ್ಕೆ ಕೂಡ ಅವಕಾಶ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಆಗಮಿಸಲು ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ನ.27ರಂದು ನಗರದ ವಿವಿಧೆಡೆ ಪೊಲೀಸ್ ಭದ್ರತೆ, ವಿಶೇಷ ಭದ್ರತಾ ತಂಡದ ಪರಿಶೀಲನೆ ಇತ್ಯಾದಿಗಳ ಜತೆಗೆ ಪ್ರಧಾನಿ ಮೋದಿ ಸುರಕ್ಷತೆಯ ಅಣಕು ಪ್ರದರ್ಶನ ನಡೆಯಲಿದೆ. ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಶ್ರೀ ಕೃಷ್ಣಮಠದ ವರೆಗೂ ರಿಹರ್ಸಲ್ ನಡೆಯಲಿರುವುದರಿಂದ ಈ ವೇಳೆ ಜೀರೋ ಟ್ರಾಫಿಕ್ ಇರಲಿದೆ. ಸಂಚಾರ ವ್ಯವಸ್ಥೆಯಲ್ಲಿ ಸ್ವಲ್ಪ ಹೊತ್ತು ವ್ಯತ್ಯಾಸವಾಗುವ ಸಾಧ್ಯತೆಯೂ ಇದೆ. ಉಳಿದಂತೆ ಯಾವುದೇ ವಾಹನಕ್ಕೆ ನ. 27ರಂದು ನಿರ್ಬಂಧ, ಸಂಚಾರ ಬದಲಾವಣೆ ಇರುವುದಿಲ್ಲ.
ಎಸ್‌ಪಿಜಿ, ಕೇಂದ್ರ ಹಾಗೂ ರಾಜ್ಯ ಗುಪ್ತಚರ ವಿಭಾಗ ಹೊರತುಪಡಿಸಿ ಸುಮಾರು 3 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 9 ಮಂದಿ ಎಸ್‌ಪಿ, ಒಬ್ಬರು ಹೆಚ್ಚುವರಿ ಎಸ್‌ಪಿ, 27 ಮಂದಿ ಡಿವೈಎಸ್‌ಪಿ, 49 ಇನ್ ಸ್ಪೆಕ್ಟರ್ ಗಳು, 127 ಪಿಎಸ್‌ಐ, 232 ಎಎಸ್‌ಐ, 1608 ಹೆಡ್ ಕಾನ್ ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳು, 309 ಮಹಿಳಾ ಪೊಲೀಸ್ ಕಾನ್ ಸ್ಟೆಬಲ್ ಗಳು, 7 ಸಶಸ್ತ್ರ ಮೀಸಲು ತಂಡ, 3 ಸಶಸ್ತ್ರ ಮೀಸಲು ಗಾರ್ಡ್, 6 ತ್ವರಿತ ಪ್ರತಿಕ್ರಿಯೆ ತಂಡ, 6 ಕೆಎಸ್‌ಆರ್‌ಪಿ, 48 ಬಾಂಬ್ ನಿಷ್ಕ್ರೀಯ ತಂಡ, 4 ಅಗ್ನಿಶಾಮಕ ವಾಹನ, 4 ಆಯಂಬುಲೆನ್ಸ್, 33 ವಾಹನಗಳು ಇರಲಿವೆ.








