ಬೆಂಗಳೂರು:ಸೆಪ್ಟೆಂಬರ್ 29:ಇಷ್ಟು ದಿನ ಯಾರೆಲ್ಲಾ ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಇತ್ತು. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ 19 ಮಂದಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.
ಈ ಬಾರಿ ಒಂಟಿ ಹಾಗೂ ಜಂಟಿಯಾಗಿ ಸ್ಪರ್ಧಿಗಳೆಲ್ಲಾ ಮನೆ ಒಳಗೆ ಹೋಗಿದ್ದಾರೆ.
ವೇದಿಕೆ ಮುಂಭಾಗದಲ್ಲಿ ಕುಳಿತ ವೀಕ್ಷಕರು ವೋಟಿಂಗ್ ಮೂಲಕ ಆಯ್ಕೆ ಮಾಡಿದರು. ಇನ್ನು ಜಂಟಿಯಾಗಿ ಕೆಲವರ ಕೈಗೆ ಸರಪಳಿ ಹಾಕಿ ಒಳಗೆ ಕಳುಹಿಸಲಾಗಿದೆ. ಎಷ್ಟು ದಿನ ದೊಡ್ಮನೆ ಒಳಗೆ ಈ ಒಂಟಿ, ಜಂಟಿ ಟ್ವಿಸ್ಟ್ ಇರುತ್ತದೆ ಕಾದು ನೋಡಬೇಕಿದೆ.
ಎಂದಿನಂತೆ ನಟ ಸುದೀಪ್ ತಮ್ಮ ಖಡಕ್ ನಿರೂಪಣೆ ಮೂಲಕ ವೇದಿಕೆಗೆ ಕಳೆ ತಂದರು.
ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆ 19 ಸ್ಪರ್ಧಿ ಗಳು ಯಾರು ಇಲ್ಲಿದೆ ಡೀಟೇಲ್ಸ್
1. ಕಾಕ್ರೋಚ್ ಸುಧಿ
‘ಟಗರು’ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಿದ್ದ ನಟ ಸುಧಿ ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದಾರೆ. ಇತ್ತೀಚೆಗೆ ಮಾಸ್ಕ್ ಧರಿಸಿ ಬೀದಿ ಬೀದಿಯಲ್ಲಿ ಅವರು ಕಾಣಿಸಿಕೊಂಡಿದ್ದರು. ಅವರು ದೊಡ್ಮನೆ ಒಳಗೆ ಹೋಗುವ ಬಗ್ಗೆ ನಾಲ್ಕೈದು ದಿನಗಳಿಂದ ಚರ್ಚೆ ಆಗ್ತಿತ್ತು. ತಮ್ಮ ಪ್ರಾಸಬದ್ಧ ಮಾತುಗಳಿಂಗ ಗಮನ ಸೆಳೆದ ಸುಧಿ ಒಂಟಿಯಾಗಿ ದೊಡ್ಮನೆ ಪ್ರವೇಶಿಸಿದರು.
2. ಕಾವ್ಯ ಶೈವ
ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದಲ್ಲಿ ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದರು. ಅವರು 2ನೇ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದಾರೆ. ‘ಕೆಂಡ ಸಂಪಿಗೆ’ ಧಾರಾವಾಹಿಯಲ್ಲಿ ಕೂಡ ಕಾವ್ಯ ಬಣ್ಣ ಹಚ್ಚಿದ್ದರು.
3. ಡಾಗ್ ಸತೀಶ್
ಶ್ವಾನಗಳ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಸತೀಶ್ 3ನೇ ಸ್ಪರ್ಧಿ. ನಾಯಿಗಳನ್ನು ಬ್ರೀಡ್ ಮಾಡುತ್ತಿದ್ದರು 10ನೇ ತರಗತಿಯಲ್ಲೇ ಸಾಕಷ್ಟು ಹಣ ಗಳಿಸುತ್ತಿದ್ದರಂತೆ. ತಮ್ಮನ್ನು ತಾವು ವಿಶ್ವದ ನಂಬರ್ 1 ಡಾಗ್ ಬ್ರೀಡರ್ ಹೇಳಿಕೊಳ್ಳುವ ಅವರು 25 ಲಕ್ಷ ರೂ. ದರ ಬಟ್ಟೆ ತೊಟ್ಟು ಇವತ್ತು ವೇದಿಕೆಗೆ ಬಂದಿದ್ದೀನಿ ಎಂದಿದ್ದಾರೆ. ಇವತ್ತು 65 ಲಕ್ಷ ರೂ. ಬರುಬೇಕಿತ್ತು, ಅದನ್ನು ಬಿಟ್ಟು ಶೋಗೆ ಬಂದಿದ್ದೀನಿ ಎಂದು ಹೇಳಿ ಕಿಚ್ಚನಿಗೆ ಅಚ್ಚರಿ ಮೂಡಿಸಿದ್ದಾರೆ.
4. ಗಿಲ್ಲಿ ನಟ
ಕಿರುತೆರೆ ಖ್ಯಾತಿಯ ಗಿಲ್ಲಿ ನಟ ಬಿಗ್‌ಬಾಸ್ ಮನೆಗೆ ಹೋಗ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಅದು ನಿಜವಾಗಿದೆ. ತಮ್ಮ ಕಾಮಿಡಿ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಪ್ರತಿಭೆ ಈಗ 50 ಲಕ್ಷ ರೂ. ಬಹುಮಾನ ಗೆಲ್ಲುವ ರಿಯಾಲಿಟಿ ಶೋಗೆ 4ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
5. ಜಾಹ್ನವಿ
ನಿರೂಪಕಿ, ನಟಿ ಜಾಹ್ನವಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ತಮ್ಮ ಡಿವೋರ್ಸ್ ಬಗ್ಗೆ ವಿಟಿಯಲ್ಲಿ ಕೂಡ ಆಕೆ ಮಾತನಾಡಿದ್ದರು. ಬಿಗ್‌ಬಾಸ್ ನನ್ನ ಹೊಸ ಅಧ್ಯಾಯ ಎಂದು ಬಲಗಾಲಿಟ್ಟು ಒಳಗೆ ಹೋಗಿದ್ದಾರೆ.
6. ಧನುಷ್
‘ಗೀತಾ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ಧನುಷ್ ಈ ಬಾರಿ ಬಿಗ್‌ಬಾಸ್ ಶೋಗೆ 6ನೇ ಸ್ಪರ್ಧಿಯಾಗಿ ಹೋಗಿದ್ದಾರೆ. ರಾಶಿಕಾ ಶೆಟ್ಟಿ ಜೊತೆ ಜಂಟಿಯಾಗಿ ಮನೆ ಒಳಗೆ ಹೋಗುವಂತಾಯಿತು. ಅಪ್ಪ-ಅಮ್ಮ, ಪತ್ನಿ, ಗೆಳೆಯರನ್ನು ಬಿಟ್ಟು 100 ದಿನಗಳ ದೊಡ್ಮನೆ ಆಟಕ್ಕೆ ಸಿದ್ಧರಾಗಿದ್ದಾರೆ.
7. ಚಂದ್ರಪ್ರಭ
‘ಗಿಚ್ಚಿ ಗಿಲಿಗಿಲಿ’ ಸೇರಿ ಕಲರ್ಸ್ ಕನ್ನಡ ವಾಹಿನಿಯ ಹಲವು ಕಾಮಿಡಿ ಶೋಗಳಲ್ಲಿ ಚಂದ್ರಪ್ರಭ ವೀಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಸೀರೆ ಉಟ್ಟು ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡು ಕಮಾಲ್ ಮಾಡಿದ್ದರು. ಇದೀಗ ಬಿಗ್‌ಬಾಸ್ ಮನೆಗೆ 7ನೇ ಸ್ಪರ್ಧಿಯಾಗಿ ಅವರು ಪ್ರವೇಶಿಸಿದ್ದಾರೆ.
8. ಮಂಜುಭಾಷಿಣಿ
ಕಿರುತೆರೆ ನಟಿ ಮಂಜುಭಾಷಿಣಿ ಬಿಗ್‌ಬಾಸ್ ಮನೆಗೆ ಹೋಗುವುದು ‘ಕ್ವಾಟ್ಲೆ ಕಿಚನ್’ ಗ್ರ್ಯಾಂಡ್ ಫಿನಾಲೆಯಲ್ಲಿ ಗೊತ್ತಾಗಿತ್ತು. ‘ಸಿಲ್ಲಿ ಲಲ್ಲಿ’ ಧಾರಾವಾಹಿಯ ಲಲಿತಾಂಬ ಪಾತ್ರದಿಂದ ಆಕೆ ಗಮನ ಸೆಳೆದರು. ಸುದೀಪ್ ಅವರನ್ನು ಹಾಡಿ ಹೊಗಳಿಗೆ ಮಂಜುಭಾಷಿಣಿ ಈ ಬಾರಿ ದೊಡ್ಮನೆ ಆಟದಲ್ಲಿ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.
9. ರಾಶಿಕಾ ಶೆಟ್ಟಿ
ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದಲ್ಲಿ ನಟಿಸಿದ್ದ ನಟಿ ರಾಶಿಕಾ ಶೆಟ್ಟಿ ಬಿಗ್‌ಬಾಸ್ ಮನೆಗೆ 9ನೇ ಸ್ಪರ್ಧಿಯಾಗಿದ್ದಾರೆ. ‘ತನನಂ ತನನಂ’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದೆ. ರಮ್ಯಾ ಜೊತೆ ಹಾಡಿಗೆ ಹೆಜ್ಜೆ ಹಾಕಿದ್ದೆ. ಅದೇ ಕಾರಣಕ್ಕೆ ಸಿನಿಮಾ ನಟಿಯಾಗುವ ಕನಸು ಕಂಡಿದ್ದಾಗಿ ಹೇಳಿದ್ದಾರೆ. ಸಾಕಷ್ಟು ಆಡಿಷನ್ ಕೊಟ್ಟು ಕೊನೆಗೆ ‘ಮನದ ಕಡಲು’ ಚಿತ್ರಕ್ಕೆ ಆಯ್ಕೆ ಆಗಿದ್ದರಂತೆ.
10. ಅಭಿಷೇಕ್
ಕಲರ್ಸ್ ವಾಹಿನಿಯ ‘ಲಕ್ಷಣ’ ಹಾಗೂ ‘ವಧು’ ಧಾರಾವಾಹಿಗಳಲ್ಲಿ ನಟಿಸಿದ್ದ ಅಭಿಷೇಕ್ ಕೂಡ 50 ಲಕ್ಷ ರೂ, ಬಹುಮಾನ ಗೆಲ್ಲುವ ಹುಮ್ಮಸ್ಸಿನಲ್ಲಿ ದೊಡ್ಮನೆಗೆ ಹೋಗಿದ್ದಾರೆ. ಸದಾ ಜಿಮ್ ಜಪ ಮಾಡುವ ಅಭಿ ಬಿಗ್‌ಬಾಸ್ ಮನೆಗೆ ಹೋದ ಮೇಲೆ ಕಷ್ಟ ಆಗಬಹುದು ಎಂದಿದ್ದಾರೆ.
11. ಮಲ್ಲಮ್ಮ
ಬಿಗ್‌ಬಾಸ್ ಮನೆಗೆ ಬೇರೆ ಬೇರೆ ಕ್ಷೇತ್ರಗಳ ಸ್ಪರ್ಧಿಗಳನ್ನು ಮಾತ್ರವಲ್ಲ ರಾಜ್ಯದ ಬೇರೆ ಬೇರೆ ಭಾಗದ ಜನರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡುವ ಪ್ರಯತ್ನ ನಡೆಯುತ್ತದೆ. ಕಳೆದ ಬಾರಿ ಉತ್ತರ ಕರ್ನಾಟಕ ಭಾಗದಿಂದ ಹಮಮಂತ ಲಮಾಣಿ ಬಂದಿದ್ದರು. ಈ ಬಾರಿ ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯ ಮಲ್ಲಮ್ಮ ಬಂದಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಆಕೆ ಗುರ್ತಿಸಿಕೊಂಡಿದ್ದಾರೆ.
12. ಅಶ್ವಿನಿ ಎಸ್. ಎನ್
‘ಮುದ್ದುಲಕ್ಷ್ಮಿ’ ಧಾರಾವಾಹಿಯ ನಟಿ ಅಶ್ವಿನಿ ಬಿಗ್‌ಬಾಸ್ ಮನೆಗೆ 12ನೇ ಸ್ಪರ್ಧಿಯಾಗಿ ಹೋಗಿದ್ದಾರೆ. ಮೈಸೂರು ಮೂಲಕ ಆಕೆ ಬೆಂಗಳೂರಿಗೆ ಬಂದ ಆರಂಭದಲ್ಲಿ ನಿರೂಪಕಿಯಾಗಿದ್ದರು. ಪೋಷಕರು ಅಂದರೆ ಬಹಳ ಭಯ ಎನ್ನುವ ಅಶ್ವಿನಿ ಅವರನ್ನು ಬಿಟ್ಟು 3 ತಿಂಗಳ ದೊಡ್ಮನೆಗೆ ಬಂದಿದ್ದಾರೆ.
13. ಧ್ರುವಂತ್
ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದ ನಟ ಧ್ರುವಂತ್ ಕೂಡ ಈ ಬಾರಿ ದೊಡ್ಮನೆ ಒಳಗೆ ಹೋಗುವ ಅವಕಾಶ ಪಡೆದಿದ್ದಾರೆ. ಮಂಗಳೂರು ಮೂಲದ ಧ್ರುವಂತ್ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸಿದ್ದರು. “ಹೊರಗೆ ವಿವಾದವನ್ನು ಹೇಗೋ ಮ್ಯಾನೇಜ್ ಮಾಡಬಹುದು. ಒಳಗಿನ ವಿವಾದವನ್ನು ಮ್ಯಾನೇಜ್ ಮಾಡೋದು ಕಷ್ಟ ಆಗಬಹುದು” ಎಂದಿದ್ದಾರೆ.
14. ರಕ್ಷಿತಾ
ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಕ್ಷಿತಾ 14ನೇ ಸ್ಪರ್ಧಿಯಾಗಿ ದೊಡ್ಮನೆ ಆಟಕ್ಕೆ ತಯಾರಾಗಿದ್ದಾರೆ. ಜಂಟಿಯಾಗಿ ಅವರು ಮನೆ ಒಳಗೆ ಹೋಗಿದ್ದು ಮಂಗಳೂರು ಮೂಲದ ರಕ್ಷಿತಾ ಮುಂಬೈನಲ್ಲಿ ನೆಲೆಸಿದ್ದಾರೆ. ಸ್ಪಷ್ಟವಾಗಿ ಕನ್ನಡ ಕಲಿಯುವ ಮಹದಾಸೆಯನ್ನು ಆಕೆ ವ್ಯಕ್ತಪಡಿಸಿದ್ದಾರೆ.
15. ಕರಿಬಸಪ್ಪ
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗೆದ್ದಿರೋ ಕರಿಬಸಪ್ಪ ಕೂಡ ಈ ಬಾರಿ ದೊಡ್ಮನೆ ಆಟದ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಅವರು ಕೂಡ ಜಂಟಿಯಾಗಿ ದೊಡ್ಮನೆ ಒಳಗೆ ಹೋಗುವಂತಾಗಿದೆ. ದಾವಣಗೆರೆ ಮೂಲದ ಕರಿಬಸಪ್ಪ ಫಿಸಿಕಲ್ ಟಾಸ್ಕ್‌ಗಳಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ.
16. ಮಾಳು
‘ನಾ ಡ್ರೈವರಾ’ ಹಾಡಿನ ಖ್ಯಾತಿಯ ಉತ್ತರ ಕರ್ನಾಟಕ ಪ್ರತಿಭೆ ಮಾಳು ಅವರಿಗೆ ಕೊನೆಗೂ ಬಿಗ್‌ಬಾಸ್ ಶೋನಲ್ಲಿ ಭಾಗಿ ಆಗುವ ಅವಕಾಶ ಸಿಕ್ಕಿದೆ. ಇಂತಹ ಪ್ರತಿಭೆಗಳನ್ನು ಶೋಗೆ ಕರೆಸಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಅಂತೂ ಇಂತೂ ಈ ಬಾರಿ ಅವರಿಗೆ ಅವಕಾಶ ಸಿಕ್ಕಿದೆ. ಹನುಮಂತು ಲಮಾಣಿ ರೀತಿ ಮಾಳು ಕಮಾಲ್ ಮಾಡ್ತಾರಾ ಕಾದು ನೋಡಬೇಕಿದೆ.
17. ಸ್ಪಂದನ
ಕಲರ್ಸ್ ಕನ್ನಡ ವಾಹಿನಿಯ ‘ಕರಿಮಣಿ’ ಧಾರಾವಾಹಿ ನಟಿ ಸ್ಪಂದನಾ ಸೋಮಣ್ಣ 17ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಶೋನಲ್ಲಿ ಭಾಗ ಆಗಿದ್ದಾರೆ. ‘ಜೋಕೆ ನಾನು ಬಳ್ಳಿಯ ಮಿಂಚು’ ಎಂದು ಹೆಜ್ಜೆ ಹಾಕುತ್ತಾ ಆಕೆ ವೇದಿಕೆ ಏರಿದ್ದರು. ‘ಕರಿಮಣಿ’ ಧಾರಾವಾಹಿಯ ಸಾಹಿತ್ಯ ಪಾತ್ರದಿಂದ ಸ್ಪಂದನಾ ಮನೆಮಾತಾಗಿದ್ದರು.
18. ಅಶ್ವಿನಿ ಗೌಡ
ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ ನಟಿ ಅಶ್ವಿನಿ ಗೌಡ ಬಳಿಕ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡಪರ ಹೋರಾಟಗಳಲ್ಲಿ ಕೂಡ ಈಕೆ ಭಾಗವಹಿಸಿದ್ದಾರೆ. 25 ಧಾರಾವಾಹಿ ಹಾಗೂ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದು ಈ ಬಾರಿ ದೊಡ್ಮನೆ ಆಟದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
19. ಅಮಿತ್
ಕೊನೆಯದಾಗಿ ಆರ್‌ಜೆ ಅಮಿತ್ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ಕಳೆದ ಬಾರಿ ಬಿಗ್‌ಬಾಸ್ ವೇಳೆ ಸುದೀಪ್ ಅವರನ್ನು ಸಂದರ್ಶನ ಮಾಡಿದ್ದ ಅಮಿತ್ ಈ ಬಾರಿ ಸ್ಪರ್ಧಿಯಾಗಿ ಮನೆಯೊಳಗೆ ಹೋಗುವ ಅವಕಾಶ ಪಡೆದಿದ್ದಾರೆ. ಬಿಗ್‌ಬಾಸ್ ಶೋನಲ್ಲಿ ಅರ್ಧ ನಾಟಕ ಮಾಡುತ್ತಾರೆ, ನಾನು ಅದನ್ನೇ ಮಾಡಲು ಬಂದಿದ್ದೀನಿ ಎಂದು ಅವರು ಹೇಳಿದ್ದಾರೆ.








