ಮಣಿಪಾಲ, ಸೆಪ್ಟೆಂಬರ್ 16, 2025: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯು, ಸೆಪ್ಟೆಂಬರ್ 17, 2025 ರಂದು ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಾದ ಗೌರವಾನ್ವಿತ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬವನ್ನು, ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಸೇವೆಗೆ ಮುಡಿಪಿಟಿದ್ದ ಅವರ ಜೀವನದ ಸಾರವನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸ್ಮರಿಸಲಿದೆ.
ಆಧುನಿಕ ಮಣಿಪಾಲದ ಶಿಲ್ಪಿ ಎನ್ನಲಾಗುವ ಡಾ. ಪೈ, ತಮ್ಮ ತಂದೆ ಡಾ. ಟಿ.ಎಂ.ಎ. ಪೈ ಅವರ ದೂರದೃಷ್ಟಿಯ ಪರಂಪರೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ವಿಶಿಷ್ಟ ನಾಯಕತ್ವದಲ್ಲಿ, ಮಣಿಪಾಲವು ಒಂದೇ ಸಂಸ್ಥೆಯಿಂದ ಈಗ ಭಾರತ ಮತ್ತು ವಿದೇಶಗಳಲ್ಲಿ ತನ್ನ ಬಾಹುಗಳನ್ನು ಚಾಚಿದ್ದು, ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದೆ. ಅದೇ ಸಮಯದಲ್ಲಿ ಮಣಿಪಾಲ್ ಆಸ್ಪತ್ರೆಯು ದೇಶದಲ್ಲಿರುವ ಅತ್ಯಂತ ವಿಶ್ವಾಸಾರ್ಹ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ. ಇವರ ಉಸ್ತುವಾರಿಯಲ್ಲಿ ಮಣಿಪಾಲವು ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಮಟ್ಟದಲ್ಲಿ ಹೆಸರಾದ ಕೇಂದ್ರವಾಗಿ ಪರಿವರ್ತನೆಯಾಗಿದೆ.
ಇವರ ಹುಟ್ಟುಹಬ್ಬದ ಆಚರಣೆಯ ಪ್ರಮುಖ ಕೇಂದ್ರಬಿಂದು ಎಂದರೆ ಅದು ಸೆಪ್ಟೆಂಬರ್ 16-18ರಂದು ಮಣಿಪಾಲದಲ್ಲಿ ನಡೆಯಲಿರುವ ಸಮಗ್ರ ರಕ್ತದಾನ ಮತ್ತು ಅಂಗಾಂಗ ದಾನ ಪ್ರತಿಜ್ಞೆ ಅಭಿಯಾನ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಮತ್ತು ಸ್ಥಳೀಯರು ಭಾಗಿಯಾಗುವ ಮೂಲಕ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಸೇವೆಯ ಬಗೆಗೆ ಡಾ. ರಾಮದಾಸ್ ಎಂ. ಪೈ ಅವರಿಗಿದ್ದ ಅಚಲವಾದ ಬದ್ಧತೆಯನ್ನು ಸಾಕಾರಗೊಳಿಸಲಿದ್ದಾರೆ.
ಮಾಹೆ ಮಣಿಪಾಲದ ಪ್ರೊ ವೈಸ್ ಚಾನ್ಸೆಲರ್ (ಆರೋಗ್ಯ ವಿಜ್ಞಾನ) ಡಾ. ಶರತ್ ರಾವ್ ಕೆ., ಅವರು ಈ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿ, ‘ರಕ್ತದಾನ ಮತ್ತು ಅಂಗಾಂಗ ದಾನ ಪ್ರತಿಜ್ಞೆಯು ಮಾನವೀಯತೆಯ ಅತ್ಯಂತ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ರಕ್ತದಾನವು ತತ್‌ಕ್ಷಣದಲ್ಲಿ ಜೀವನ್ನು ಉಳಿಸಿದರೆ, ಅಂಗಾಂಗ ದಾನದ ಪ್ರತಿಜ್ಞೆಯು ಭವಿಷ್ಯದಲ್ಲಿ ಇತರರಿಗೆ ಜೀವನದ ಭರವಸೆಯನ್ನು ನೀಡುತ್ತದೆ ಹಾಗು ಮರಣದ ನಂತರ ತಮ್ಮ ಅಂಗಾಂಗಳನ್ನು ಅಗತ್ಯವಿರುವವರಿಗೆ ದಾನ ಮಾಡುವ ಸ್ವಯಂಪ್ರೇರಿತ ಬದ್ಧತೆಯಾಗಿದೆ. ಈ ಉದಾತ್ತ ಉದ್ದೇಶಕ್ಕಾಗಿ ಒಟ್ಟಾಗಿ ಸೇರುವ ಮೂಲಕ, ನಮ್ಮ ವಿದ್ಯಾರ್ಥಿಗಳು ಮತ್ತು ಸ್ಥಳೀಯರು, ಜೀವಗಳನ್ನು ಉಳಿಸುವುದಲ್ಲದೆ, ಡಾ. ರಾಮದಾಸ್ ಪೈ ಅವರ ಸೇವೆಯ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಈ ಕಾರ್ಯಕ್ರಮವು ಅವರ ದೃಷ್ಟಿಕೋನಕ್ಕೆ ಪೂರಕವಾದ ಆಚರಣೆಯಾಗಿದೆ’ ಎಂದರು.
ಆಚರಣೆಯ ಭಾಗವಾಗಿ, ಮಾಹೆ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಗುವುದು, ಅವುಗಳೆಂದರೆ:
• ಮಣಿಪಾಲದ ಕಸ್ತೂರಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ
• ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು
• ಮಂಗಳೂರಿನ ಕಸ್ತೂರಬಾ ಆಸ್ಪತ್ರೆ, ಕೆಎಂಸಿ ಅತ್ತಾವರ ಮತ್ತು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು
• ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರಿನ ಲೇಡಿ ಗೋಷೆನ್ ಆಸ್ಪತ್ರೆ ಸೇರಿದಂತೆ ಕಸ್ತೂರಬಾ ವೈದ್ಯಕೀಯ ಕಾಲೇಜು ಆಡಳಿತದ ಸರ್ಕಾರಿ ಆಸ್ಪತ್ರೆಗಳು.
ರೋಗಿಗಳ ಆರೋಗ್ಯ ಮತ್ತು ಪೋಷಣೆಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ, ಸಮಗ್ರ ಆರೋಗ್ಯ ಸಂರಕ್ಷಣೆ ಬಗ್ಗೆ ಸಂಸ್ಥೆಯು ಹೊಂದಿರುವ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.
ಸ್ವಯಂಸೇವಕ ಸೇವಾ ಸಂಸ್ಥೆಯು (ವಿಎಸ್‌ಒ) ಸೆಪ್ಟೆಂಬರ್ 17 ರಂದು ಬೆಳಿಗ್ಗೆ 9:30 ಕ್ಕೆ ಮಣಿಪಾಲದ ಡಾ. ಟಿಎಂಎ ಪೈ ಹಾಲ್‌ನಲ್ಲಿ ತನ್ನ ಪ್ರಮುಖ ಸಮ್ಮೇಳನಕ್ಕೆ ಚಾಲನೆ ನೀಡಲಿದೆ. ‘ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಪರಿವರ್ತನೆಯ ಮುಂದಾಳತ್ವ’ ಎಂಬ ವಿಷಯದೊಂದಿಗೆ ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ತಜ್ಞರ ವಿಚಾರ ಸಂಕೀರ್ಣ, ಯುವ ನೇತೃತ್ವದ ಸಂವಾದ ಕಾರ್ಯಕ್ರಮ , ಸಮುದಾಯ ಕಾರ್ಯಗಳನ್ನು ತೋರಿಸುವ ಎನ್‌ಜಿಒ ಪ್ರದರ್ಶನ ಮತ್ತು ನವೀನ ಸುಸ್ಥಿರತೆ ಪರಿಹಾರಗಳನ್ನು ತೋರಿಸುವ ಪೋಸ್ಟರ್ ಸ್ಪರ್ಧೆ ಇರಲಿದೆ.
ಮಾಹೆಯ ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗವು ರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯನ್ನು ಆಯೋಜಿಸಿದ್ದು, ಸೃಜನಶೀಲತೆ ಮತ್ತು ದೃಶ್ಯ ಅಭಿವ್ಯಕ್ತಿಯನ್ನು ಆಚರಿಸುವ ಸಲುವಾಗಿ ‘ಮೇಘಮಲ್ಹಾರ್: ಮಳೆ ಮತ್ತು ಲಯಕ್ಕೆ ದೃಶ್ಯ ಗೌರವ’ ಹಾಗು “ನನ್ನ ಮಾಹೆ, ನನ್ನ ಕ್ಯಾಂಪಸ್’ ಎರಡು ವಿಭಿನ್ನ ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿತ್ತು.
ಈ ಸ್ಪರ್ಧೆಯಲ್ಲಿ ವಿಜೇತರಾದ ಮತ್ತು ಅಂತಿಮ ಸುತ್ತಿಗೆ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನವು ಸೆಪ್ಟೆಂಬರ್ 17ರ ಬೆಳಿಗ್ಗೆ10:00ಕ್ಕೆ ಮಣಿಪಾಲದ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಉದ್ಘಾಟನೆಯಾಗಲಿದೆ. ಈ ಪ್ರದರ್ಶನವು ಸೆಪ್ಟೆಂಬರ್ 18 ಮತ್ತು 19 ರಂದು ಸಾರ್ವಜನಿಕರಿಗೆ ತೆರೆದಿರಲಿದೆ.
ಕುಲಪತಿಗಳ 90 ನೇ ಹುಟ್ಟುಹಬ್ಬದ ಗೌರವಾರ್ಥವಾಗಿ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ (AGE) ಕಾಲೇಜು ಶಿಕ್ಷಕರ 4ನೇ ಸಮಾವೇಶವು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಸೆಪ್ಟೆಂಬರ್ 20, 2025 ರ ಶನಿವಾರದಂದು ನಡೆಯಲಿದೆ.
ಹುಟ್ಟುಹಬ್ಬದ ಮುಖ್ಯ ಆಚರಣೆಗಳು ಮಣಿಪಾಲ ಕ್ಯಾಂಪಸ್‌ನಲ್ಲಿ ನಡೆಯಲಿದ್ದು, ಭಾರತದಾದ್ಯಂತ ಮಣಿಪಾಲ ಗ್ರೂಪ್‌ನ ಇತರ ಕ್ಯಾಂಪಸ್‌ಗಳು ಇದೇ ರೀತಿಯ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಇದು ಡಾ. ಪೈ ಅವರ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ನೀಡಿದ ಪರಿವರ್ತನಾತ್ಮಕ ಕೊಡುಗೆಗಳ ಬಗ್ಗೆ ವ್ಯಾಪಕ ಗೌರವ ಮತ್ತು ಮೆಚ್ಚುಗೆಯನ್ನು ಪ್ರದರ್ಶಿಸುತ್ತದೆ.
ಡಾ. ಪೈ ಅವರ ಶಿಕ್ಷಣ ಮತ್ತು ಆರೋಗ್ಯ ಕುರಿತ ದೃಷ್ಟಿಕೋನಕ್ಕೆ ಅನುಗುಣವಾಗಿರುವ ಈ ಆಚರಣೆಗಳು, 90ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಅವರ ಗಮನಾರ್ಹ ಕೊಡುಗೆಗಳಿಗೆ ಗೌರವ ಸಲ್ಲಿಸುತ್ತವೆ. ಈ ಕಾರ್ಯಕ್ರಮಗಳು ಶೈಕ್ಷಣಿಕ ಕ್ಷೇತ್ರವನ್ನು ಮೀರಿದ ಶ್ರೇಷ್ಠತೆ ಬಗೆಗೆ ಮಾಹೆಯ ಬದ್ಧತೆ, ಸಮಗ್ರ ಅಭಿವೃದ್ಧಿ ಮತ್ತು ಸಮುದಾಯ ಸೇವೆಯ ಬಗ್ಗೆ ಒತ್ತಿಹೇಳುತ್ತವೆ.








