ಆಗಸ್ಟ್ 06:ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಮೇಘಸ್ಫೋಟ ಭಾರೀ ವಿನಾಶವನ್ನು ಉಂಟುಮಾಡಿದೆ. ಖೀರ್ ಗಂಗಾ ನದಿಯ ಮೇಲ್ಭಾಗದಲ್ಲಿ ಈ ಮೇಘಸ್ಫೋಟ ಭಾರೀ ಪ್ರವಾಹ ಮತ್ತು ಭೂಕುಸಿತವನ್ನ ಉಂಟುಮಾಡಿದ್ದು, ಡಜನ್ಗಟ್ಟಲೆ ಮನೆಗಳು, ಹೋಟೆಲ್ಗಳು, ಮತ್ತು ಅಂಗಡಿಗಳು ಕೊಚ್ಚಿಹೋಗಿವೆ. ಈ ಘಟನೆಯಿಂದ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈವರೆಗೂ ಪ್ರವಾಹದಲ್ಲಿ ಸಿಲುಕಿದ್ದ 130ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಗಂಗೋತ್ರಿ ಯಾತ್ರೆಯ ಮಾರ್ಗದಲ್ಲಿರುವ ಧರಾಲಿ ಗ್ರಾಮದ ಮಾರುಕಟ್ಟೆ ಪ್ರದೇಶವು ಖೀರ್ ಗಢ್ನ ನೀರಿನ ಮಟ್ಟ ಏರಿಕೆಯಿಂದ ಭಾರೀ ಹಾನಿಗೊಳಗಾಗಿದೆ. ಈ ದುರಂತದ ಬಳಿಕ ಭಾರತೀಯ ಸೇನೆ, ಐಟಿಬಿಪಿ, ಎನ್ಡಿಆರ್ಎಫ್, ಮತ್ತು ಎಸ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿ, ಬಾಗೇಶ್ವರ, ಪಿಥೋರಗಢ, ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ ಆಗಸ್ಟ್ 10ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕಾರಣದಿಂದ ಉತ್ತರಕಾಶಿಯ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಚಂಪಾವತ್, ಪೌರಿ, ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ 1 ರಿಂದ 12ನೇ ತರಗತಿಯವರೆಗಿನ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿದೆ. ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕು ಉಂಟಾಗಿದ್ದು, ಜೆಸಿಬಿ ಯಂತ್ರಗಳ ಮೂಲಕ ರಸ್ತೆ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.








