ಕಾರ್ಕಳ: ಜುಲೈ 17:ಪುತ್ರನ ಸಾವಿನ ನಂತರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪಾಲಕರು ತಮ್ಮ ಮಗನನ್ನು ಕಳೆದುಕೊಂಡ ನೋವಿನಲ್ಲಿ ಸಾರ್ಥಕ ಕಂಡ ಅಪರೂಪದ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ನಡೆದಿದೆ ನಂದಳಿಕೆಯ ನಿತೀಶ್ ಎನ್ (46) ಬಾಂಗ್ಲಾದೇಶದಲ್ಲಿ ಬೆಂಗಳೂರು ಮೂಲದ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದು ಜು. 15ರಂದು ಮೃತ ಪಟ್ಟಿದ್ದರು. ಆತನ ಪತ್ನಿ ಹಾಗೂ ತಾಯಿ ವಿಮಲಾರ ವಿನಂತಿ ಮೇರೆಗೆ ಮೃತನ ಕಿಡ್ನಿ, ಹೃದಯ ಹಾಗೂ ಕಣ್ಣುಗಳನ್ನು ದಾನ ಮಾಡಲಾಗಿದೆ. ಈ ಮೂಲಕ ನಿತೀಶ್ ಸಾವಿನಲ್ಲೂ ಸಾರ್ಥಕ್ಯವನ್ನು ಮೆರೆದಿದ್ದಾರೆ. ನಿತೀಶ್ ಹಾಳೆಕಟ್ಟೆಯ ದಿ. ಸುಂದರ ಕೋಟ್ಯಾನ್ ಹಾಗೂ ವಿಮಲಾ ದಂಪತಿಯ ಪುತ್ರ.
ನಿತೀಶ್ ಒಂದು ಕಣ್ಣಿನ ದೃಷ್ಟಿಯ ಬಗ್ಗೆ ತೊಂದರೆ ಎದುರಿಸುತ್ತಿದ್ದು ತಪಾಸಣೆಗಾಗಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದು, ತಪಾಸಣೆ ಸಂದರ್ಭ ತೊಂದರೆ ಉಂಟಾಗಿ ಆ್ಯಂಜಿಯೋಪ್ಲಾಸ್ಟ್ ಮಾಡಲಾಗಿತ್ತು. ಬಳಿಕ ಮೆದುಳಿನ ಶಸ್ತ್ರ ಚಿಕಿತ್ಸೆಯ ಅಗತ್ಯವೆಂದು ಅದನ್ನೂ ಮಾಡಿದರೂ ರಕ್ತಸ್ರಾವ ನಿಲ್ಲದೇ ಮೃತರಾದರು. ಮರಣಾನಂತರ ತನ್ನ ಮಗನ ದೇಹದ ಅಂಗಾಂಗ ಇನ್ನೊಬ್ಬರಿಗೆ ಉಪಯೋಗವಾಗಲೆಂಬ ಉದ್ದೇಶದಿಂದ ತಾಯಿ ದಾನಕ್ಕೆ ಮುಂದಾದರು. ಪತ್ನಿ ಶೈಲಜಾರವರೂ ಇದಕ್ಕೆ ಸಮ್ಮತಿಸಿದ್ದು, ಈ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ನಂದಳಿಕಸತೀಶ್ ರವರಿಗೆ ತಪಸ್ಯಾ ಎಂಬ 7 ವರ್ಷದ ಪುತ್ರಿ ಇದ್ದಾರೆ. ನಿತೀಶ್ ರವರ ಮೃತ ದೇಹದ ಅಂತ್ಯ ಕ್ರಿಯೆ ಅವರ ಮಾವ ವಸಂತ ನಂದಳಿಕೆಯವರ ಮನೆಯಲ್ಲಿ ನಡೆಯಿತು.
ವ್ಯಕ್ತಿ ಮರಣ ಹೊಂದಿದ ನಂತರವೂ ಆತನ ಹೆಸರು ಶಾಶ್ವತವಾಗಬೇಕಾದರೆ ಇಂಥ ಕೆಲಸ ಒಳ್ಳೆಯದು. ಅಂಗಾಂಗ ಧಾನ ನೀಡುವ ಬಗ್ಗೆ ನಿತೀಶ್ ಅವರ ತಾಯಿ ಹಾಗೂ ಪತ್ನಿಯ ನಿರ್ಧಾರ ಸಮಾಜಕ್ಕೆ ಮಾದರಿ . ಆತನ ನಿಧನದ ಬಗ್ಗೆ ದುಃಖವಿದೆ. ಆದರೆ ಅಂಗಾಂಗ ದಾನ ಮಾಡಿದ ಬಗ್ಗೆ ಹೆಮ್ಮೆಯಿದೆ ಎನ್ನುತ್ತಾರೆ ಮಾವ ವಸಂತ ನಂದಳಿಕೆ.