ಉಡುಪಿ, ಜುಲೈ 08: ಕೊಡಂಕೂರಿನಲ್ಲಿ ಎರಡು ಮನೆಗಳಿಗೆ ನುಗ್ಗಿ ಅಪಾರ ಮೌಲ್ಯದ ಸೊತ್ತಗಳನ್ನು ಕಳವು ಮಾಡಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ .
ಕೊಡಂಕೂರಿನ ಶಕುಂತಲಾ ಶೆಟ್ಟಿ ಅವರ ಮನೆಯಲ್ಲಿ ನಡೆದ ಕಳ್ಳತನದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಲಾಗಿದೆ. ಇವರು ಹೆಚ್ಚಾಗಿ ಅಮ್ಮುಂಜೆಯ ಅವರ ಅಕ್ಕನ ಮಗಳ ಮನೆಯಲ್ಲಿ ಇರುತ್ತಿದ್ದು, 15 ದಿನಗಳಿಗೊಮ್ಮೆ ಇಲ್ಲಿಗೆ ಬಂದು ಮನೆ ಸ್ವಚ್ಛ ಮಾಡಿ ಹೋಗುತ್ತಿದ್ದರು. ಜೂ.20 ರಂದು ಎಂದಿನಂತೆ ಬೆಳಗ್ಗೆ ಬಂದು ಹೋಗಿದ್ದರು. ಜು.7 ರಂದು ಬೆಳಗ್ಗೆ ನೆರೆ ಮನೆಯ ವಾಸುದೇವ ರಾವ್ ಅವರು ಶಕುಂತಲಾ ಅವರಿಗೆ ಕರೆ ಮಾಡಿ ಮನೆಯ ದ್ವಾರದ ಬೀಗ ಮುರಿದಿರುವುದಾಗಿ ತಿಳಿಸಿದ್ದರು. ಕೂಡಲೇ ಶಕುಂತಲಾ ಬಂದು ಗಮನಿಸಿದಾಗ ಮನೆಯ ಎದುರಿನ ಬಾಗಿಲು ತೆರೆದಿತ್ತು. ಒಳಗೆ ಹೋಗಿ ಕಂಡಾಗ ಕಳ್ಳರು ಆಯುಧದಿಂದ ಬಾಗಿಲನ್ನು ಮುರಿದು ಒಳನುಗ್ಗಿ ಗೋದ್ರೇಜ್ ಕಪಾಟಿನಲ್ಲಿದ್ದ ಚಿನ್ನದ ಕಿವಿ ಬೆಂಡೋಲೆ, ಲಕ್ಷ್ಮೀ ಪೆಂಡೆಂಟ್, ಚಿನ್ನದ ಉಂಗುರ, ಕೆಂಪು ಹವಳದ ಚಿನ್ನದ ಸರ, ಚಿನ್ನದ ಕಪ್ಪು ಮಣಿಸರ, ಬೆಳ್ಳಿಯ ಸೊಂಟದ ಪಟ್ಟಿ, ಬೆಳ್ಳಿಯ ಕಾಲು ಗೆಜ್ಜೆ, ಸಹಿತ ಒಟ್ಟು 1.70 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಸೊತ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಕಲಾವತಿ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2025, ಕಲಂ: 331(3), 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಮೂರು ವರ್ಷದಿಂದ ಶಿಕಾರಿಪುರದಲ್ಲಿ ಟೈಲ್ಸ್ ಉದ್ಯಮ ನಡೆಸುತ್ತಿರುವ ಕೊಡಂಕೂರಿನ ಅಶ್ವತ್ ಅವರ ಮನೆಗೂ ಕಳ್ಳರು ನುಗ್ಗಿದ್ದಾರೆ. ಇವರ ಮನೆಯಲ್ಲಿ ತಾಯಿ ಮಾತ್ರ ವಾಸವಿದ್ದು, ವಾರಕ್ಕೊಮ್ಮೆ ಅವರ ತಂಗಿ ಮಗಳು ಚೈತ್ರಾ ಬರುತ್ತಿದ್ದರು. ಅಶ್ವತ್ ಅವರು ತಾಯಿಯನ್ನು 15 ದಿನಗಳ ಹಿಂದೆ ಶಿಕಾರಿಪುರಕ್ಕೆ ಕರೆದೊಯ್ದಿದ್ದರು. ಜು.5ರಂದು ಚೈತ್ರಾ ಕೊಡಂಕೂರಿನ ಮನೆಗೆ ರಾತ್ರಿ ಬಂದು ಬಳಿಕ ಕೊಡಂಕೂರಿನ ಗೆಳತಿಯ ಮನೆಗೆ ಹೋಗಿದ್ದರು. ಜು.6 ರಂದು ಬೆಳಗ್ಗೆ ನೋಡಿದಾಗ ಮನೆಯ ಎದುರು ಭಾಗ ಮುರಿದಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಳ್ಳರು ಮನೆಯ ಮುಂದಿನ ಬಾಗಿಲು ಒಡೆದು 5 ಗ್ರಾಂ ತೂಕದ ಚಿನ್ನದ ಕಿವಿ ಓಲೆ, 2 ಗ್ರಾಂ ತೂಕದ ಚಿನ್ನದ ಪೆಂಡೆಂಟ್ ಹಾಗೂ 20 ಸಾವಿರ ರೂ.ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2025, ಕಲಂ: 331(3) , 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.