ಮುರುಡೇಶ್ವರ : ಜೂನ್ 23 :ವಿಶ್ವಪ್ರಸಿದ್ಧ ಶಿವ ಕ್ಷೇತ್ರವಾದ ಮುರುಡೇಶ್ವರವು ಧಾರ್ಮಿಕ ಕೇಂದ್ರವಾಗಿರುವುದರ ಜೊತೆಗೆ ಪ್ರಮುಖ ಪ್ರವಾಸಿ ತಾಣವಾಗಿದೆ. ಲಕ್ಷಾಂತರ ಪ್ರವಾಸಿಗರು ವರ್ಷವಿಡೀ ಇಲ್ಲಿಗೆ ಭೇಟಿ ನೀಡುತ್ತಾರೆ.ಇಲ್ಲಿನ 123 ಅಡಿ ಎತ್ತರದ ಬೃಹತ್ ಶಿವನ ಪ್ರತಿಮೆ ವಿಶ್ವದಾದ್ಯಂತ ಜನಪ್ರಿಯವಾಗಿವೆ.
ಕಡಲತೀರದಲ್ಲಿ ಸಮಯ ಕಳೆದ ನಂತರ, ಭಕ್ತರು ಶಿವನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದರೆ, ಕೆಲವು ಪುರುಷರು ಚಡ್ಡಿ, ಬನಿಯನ್‌ನಂತಹ ಅನುಚಿತ ಉಡುಗೆಯಲ್ಲಿ ಮತ್ತು ಮಹಿಳೆಯರು ಧಾರ್ಮಿಕ ಸ್ಥಳಕ್ಕೆ ತಕ್ಕಂತಹ ಸಭ್ಯ ಉಡುಗೆ ಧರಿಸದೇ ದೇವಾಲಯಕ್ಕೆ ಬರುತ್ತಿದ್ದರು. ಇದರಿಂದ ಆಸ್ತಿಕ ಭಕ್ತರು ಆಕ್ಷೇಪ ವ್ಯಕ್ತಪಡಿಸಿ, ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿರುವ ದೇವಾಲಯದ ಆಡಳಿತ ಮಂಡಳಿಯು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ, ಪುರುಷರು ಪಂಚೆ, ಧೋತಿ, ಅಥವಾ ಸಾಂಪ್ರದಾಯಿಕ ಉಡುಗೆಯೊಂದಿಗೆ ಶರ್ಟ್ ಧರಿಸಬೇಕು. ಮಹಿಳೆಯರಿಗೆ ಸೀರೆ, ಚೂಡಿದಾರ, ಅಥವಾ ಸಾಂಪ್ರದಾಯಿಕ ಉಡುಗೆ ಕಡ್ಡಾಯವಾಗಿದೆ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ದೇವಾಲಯಕ್ಕೆ ಪ್ರವೇಶ ನಿರಾಕರಿಸಲಾಗುವುದು. ದೇವಾಲಯದ ಮುಂಭಾಗದಲ್ಲಿ ಸೂಚನಾ ಫಲಕವನ್ನು ಸ್ಥಾಪಿಸಲಾಗಿದ್ದು, ಅಗತ್ಯವಾದ ಉಡುಗೆಯ ವಿವರಗಳನ್ನು ಅದರಲ್ಲಿ ನಮೂದಿಸಲಾಗಿದೆ.