ಮಂಗಳೂರು :ಜೂನ್ 23:ವಿಶ್ವವಿದ್ಯಾನಿಲಯದಲ್ಲಿ ದುಡಿಯುತ್ತಿರುವ ಸಿಬ್ಬಂದಿ ಗಳಲ್ಲಿ ಶಿಸ್ತು ಮತ್ತು ಒಗ್ಗಟ್ಟು ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಪಿ.ಎಲ್. ಧರ್ಮ ಹೇಳಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಯೂನಿಯನ್ ಬ್ಯಾಂಕ್ ಚೇರ್ ವತಿಯಿಂದ ಆಯೋಜಿಸಲಾದ ಮಂಗಳೂರು ವಿಶ್ವವಿದ್ಯಾನಿಲಯದ ಗ್ರೂಪ್ ಡಿ ನಿರ್ವಹಣಾ ಸಿಬ್ಬಂದಿಗಳಿಗೆ ಸಶಸ್ತಿಕರಣ ಮತ್ತು ಆರ್ಥಿಕ ಒಳಗೊಳ್ಳುವಿಕೆ ಕುರಿತ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿಬ್ಬಂದಿಗಳು ಸಮಯ ಪ್ರಜ್ಞೆ, ಶಿಸ್ತು, ಗೌರವ ಹಾಗೂ ಬೇಧ ಭಾವ ಮಾಡದೆ ನಾವೆಲ್ಲರೂ ಒಂದೇ ಎನ್ನುವ ನೆಲೆಯಲ್ಲಿ ಒಗ್ಗಟ್ಟನ್ನು ತೋರಬೇಕು. ಇದು ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ನುಡಿದರು.
ಮುಖ್ಯ ಅತಿಥಿ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ದಾಮೋದರ್ ಮಾತನಾಡುತ್ತಾ ನಮಗೆ ಲಭಿಸಿದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಹಾಗೂ ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಹಾಗೂ ಗೌರವದಿಂದ ಕೈಗೊಳ್ಳಬೇಕು. ನಾವೆಲ್ಲರೂ ಎಲ್ಲರೊಂದಿಗೆ ಬೆರೆತು ನಮ್ಮಲ್ಲಿ ಆತ್ಮವಿಶ್ವಾಸ, ಸಂವಹನ ಹೆಚ್ಚಿಸಿ ಕೊಳ್ಳುವುದು ಹಾಗೂ ಉಳಿತಾಯ ಮನೋಭಾವ ಮತ್ತು ಪರಸ್ಪರ ಸಹಕಾರ ಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಯೂನಿಯನ್ ಬ್ಯಾಂಕ್ ಚೇರ್ ಸಂಯೋಜಕರಾದ ಡಾ. ಪ್ರೀತಿ ಕೀರ್ತಿ ಡಿಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲವ ಮಹದೇವಪ್ಪ ಉಪಸ್ಥಿತರಿದ್ದರು.
ಇಂಜಿನಿಯರ್ ವಿಭಾಗದ ಹರೀಶ್ ಪೂಜಾರಿ ಮತ್ತು ವಾಣಿಜ್ಯ ವಿಭಾಗದ ಕಚೇರಿ ಸಿಬ್ಬಂದಿ ಪೂರ್ಣಿಮಾ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಪ್ರಾಧ್ಯಾಪಕರಾದ ಡಾ. ವೈ. ಮುನಿರಾಜು, ಡಾ. ದಿನಕರ ಕೆಂಜೂರು, ರಶ್ಮಿತಾ ಆರ್. ಕೋಟ್ಯಾನ್, ಗುರುರಾಜ್ ಪಿ, ವೈಶಾಲಿ ಕೆ, ಸಿ. ಲಹರಿ ಮತ್ತು ರಮ್ಯಾ ರಾಮಚಂದ್ರ ನಾಯ್ಕ್ ಹಾಗೂ ವಾಣಿಜ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಕಾರ್ತಿಕ್ ಎಸ್, ಸುದೀಪ್ ಎಚ್.ಆರ್, ನಿರ್ಮಲ ಬಿ, ಕಾವ್ಯ ಎಚ್.ಎಸ್, ಮಹಮದ್ ಫಾರಿಸ್ ಹಾಗೂ ಅಚ್ಚಯ್ಯ ಡಿ.ಪಿ. ಹಾಜರಿದ್ದರು.
ನಿರ್ಮಲ ಬಿ. ಪ್ರಾರ್ಥಿಸಿದರು. ಕಾವ್ಯ ಎಚ್.ಎಸ್. ಸ್ವಾಗತಿಸಿದರು. ಕಾರ್ತಿಕ್ ಎಸ್. ಧನ್ಯವಾದ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಾರ್ಥಕ್ ಟಿ. ಗೈದರು.