ಉಡುಪಿ, ಜನವರಿ.31:ಉಡುಪಿಯ ರಥಬೀದಿ ರಾಘವೇಂದ್ರ ಮಠದ ಎದುರು ಅಸಹಾಯಕ ಸ್ಥಿತಿಯಲ್ಲಿ ಇದ್ದ ವೃದ್ಧೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿರುವ ಘಟನೆ ನಡೆದಿದೆ.
ರಕ್ಷಿಸಲ್ಪಟ್ಟ ವೃದ್ಧೆಯ ಹೆಸರು ಸುಧಾ (ಪತಿ: ವಾಸುದೇವ ರಾವ್ ಕುಲಕರ್ಣಿ) ಆಗಿದ್ದು, ಅವರು ಕಲಬುರ್ಗಿ ಜಿಲ್ಲೆಯ ಧನಗರಗಲ್ಲಿ, ಬಹಮನಿಪುರ ನಿವಾಸಿ ಎಂಬುದು ತಿಳಿದುಬಂದಿದೆ. ವೃದ್ಧೆಯ ವಾರಸುದಾರರು ಕಾರ್ಕಳದ ಹೊಸಬೆಳಕು ಆಶ್ರಮವನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ವೃದ್ಧೆಯ ಅಸಹಾಯಕ ಸ್ಥಿತಿಯನ್ನು ಗಮನಿಸಿದ ಶ್ರೀಮಠದ ಭಕ್ತೆ ಅಪೂರ್ವ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಒಳಕಾಡುವರು ವಿಚಾರಣೆ ನಡೆಸಿದಾಗ, ವೃದ್ಧೆಯು ನೆಲೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದುದಾಗಿ ತಿಳಿದುಬಂದಿತು.

ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ವೃದ್ಧೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಂದು ವಾರ ಕಾಲ ಚಿಕಿತ್ಸೆಗಾಗಿ ನಿತ್ಯಾನಂದ ಒಳಕಾಡುವರು ದಾಖಲಿಸಿದ್ದರು. ಚಿಕಿತ್ಸೆ ನಂತರ ವೃದ್ಧೆಗೆ ಕಾರ್ಕಳದ ಬೈಲೂರಿನಲ್ಲಿ ಇರುವ ಹೊಸಬೆಳಕು ಆಶ್ರಮದಲ್ಲಿ ಪುನರ್ವಸತಿ ಕಲ್ಪಿಸಲಾಯಿತು.
ಹೊಸಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್ ಹಾಗೂ ಮೇಲ್ವಿಚಾರಕ ಗೌರೀಶ್ ಅವರು ವೃದ್ಧೆಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.






