ಉಡುಪಿ : ಏಪ್ರಿಲ್ 13 :- ಕಳೆದ ಮೂರು ದಿನಗಳ ಹಿಂದೆ ಕರಾವಳಿ ಬೈಪಾಸ್ ಬಳಿ ರೋದಿಸುತ್ತಿದ್ದ ಯುವತಿಯನ್ನು ವಿಶುಶೆಟ್ಟಿ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಸಖಿ ಸೆಂಟರಿನ ಸಿಬ್ಬಂದಿಗಳ ಸಹಾಯದಿಂದ ಯುವತಿಯ ತಂದೆಯನ್ನು ಪತ್ತೆ ಹಚ್ಚಿ ಹಸ್ತಾಂತರಿಸಿದ ಘಟನೆ ನಡೆದಿದೆ.
ರಕ್ಷಿಸಲ್ಪಟ್ಟ ಯುವತಿ ಸೌಮ್ಯ (20 ವರ್ಷ) ಮೂಲತಃ ಬಿಜಾಪುರದವಳಾಗಿದ್ದು ರಕ್ಷಿಸಿ ಮೊದಲು ಸಖಿ ಸೆಂಟರಿಗೆ ವಿಶುಶೆಟ್ಟಿ ದಾಖಲಿಸಿದ್ದರು. ತದನಂತರ ಯುವತಿಯ ಮಾನಸಿಕ ರೋಗದಿಂದ ಚೀರಾಟದೊಂದಿಗೆ ಧಾಂದಲೆ ನಡೆಸಲು ಪ್ರಾರಂಭಿಸಿದಾಗ ಕೂಡಲೇ ವಿಶುಶೆಟ್ಟಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು.
ಯುವತಿಯಿಂದ ಸಿಕ್ಕ ಮಾಹಿತಿಯ ಆಧಾರದಲ್ಲಿ ಸಖಿ ಸೆಂಟರಿನವರು ಮನೆಯವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ದಿನಾಂಕ ಎಪ್ರಿಲ್.13 ರಂದು ಯುವತಿಯ ತಂದೆ ಹಾಗೂ ಸಹೋದರಿ ಉಡುಪಿಗೆ ಬಂದು ಕಾನೂನು ಪ್ರಕ್ರಿಯೆಯನ್ನು ಸಖಿ ಸೆಂಟರಿನಲ್ಲಿ ನಡೆಸಿ ತಂದೆಯ ವಶ ಒಪ್ಪಿಸಲಾಯಿತು. ಆಸ್ಪತ್ರೆಯ ವೆಚ್ಚ ಭರಿಸಲು ಕಡು ಬಡತನದ ತಂದೆ ಅಸಹಾಯಕರಾದಾಗ ವಿಶುಶೆಟ್ಟಿ ಭರಿಸಿ ನೆರವಾದರು.
ಮಗಳು ಕಳೆದ ವರ್ಷ ದ್ವೀತಿಯ ಪಿ.ಯು.ಸಿ ಯಲ್ಲಿ ಅನುತೀರ್ಣಳಾದಾಗ ಮಾನಸಿಕ ಖಾಯಿಲೆಗೆ ತುತ್ತಾಗಿದ್ದಳು. ಕಾಣೆಯಾದಾಗ ಹುಡುಕಿ ಸಿಗದಿದ್ದಾಗ, ಪೋಲಿಸ್ ದೂರು ನೀಡಲು ಮುಂದಾದಾಗ ಉಡುಪಿಯಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿತು. ಸಹಕರಿಸಿದ ವಿಶುಶೆಟ್ಟಿ ಹಾಗೂ ಸಖಿ ಸಂಟರಿನರು ನೀಡಿದ ನೆರವು ಹಾಗೂ ಮಾನವೀಯತೆಗೆ ಋಣಿಯಾಗಿದ್ದೇನೆ. ಎಂದು ಭೀಮಪ್ಪ ಯುವತಿಯ ತಂದೆ ತಿಳಿಸಿದ್ದಾರೆ