ಮಂಗಳೂರು, ಮಾ. 17: ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ಅಪರಿಚಿತರು ನಿವೃತ್ತ ವ್ಯಕ್ತಿಯೊಬ್ಬರಿಂದ 25.85 ಲಕ್ಷ ರೂ. ವಂಚಿಸಿರುವ ಘಟನೆ ಸೆನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
64 ವರ್ಷದ ದೂರುದಾರರಿಗೆ ವಾಟ್ಸ್‌ಆಪ್ ಮೂಲಕ ಬಂದ ಸಂದೇಶದಲ್ಲಿ ಟ್ರೇಡಿಂಗ್ ಸಂಬಂಧಿತ ಮಾಹಿತಿ ನೀಡಲಾಗಿತ್ತು. ಟ್ರೇಡಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು ಆ ಸಂದೇಶದ ಆಧಾರದ ಮೇಲೆ ಅಪರಿಚಿತರೊಂದಿಗೆ ಚಾಟಿಂಗ್ ಆರಂಭಿಸಿದ್ದರು.
ನಂತರ ಆರೋಪಿಗಳು ಅವರನ್ನು ಹಲವು ವಾಟ್ಸ್‌ಆಪ್ ಗುಂಪುಗಳಿಗೆ ಸೇರಿಸಿದ್ದರು. ‘ಎಟೋರೊ ಅನಲಿಟಿಕಲ್ ಟೀಂ 1332’ ಎಂಬ ಗುಂಪಿನ ಲೀಡರ್ ಎಂದು ಪರಿಚಯಿಸಿಕೊಂಡ ಹರ್ಷ ಎಂಬಾತ, ‘ಗ್ಯಾಲಕ್ಸಿ ಡಿಜಿಟಲ್ ಸ್ಟಾಕ್ ಎಕ್ಸ್‌ಚೇಂಜ್’ ಮೂಲಕ ಹೂಡಿಕೆ ಮಾಡಿದರೆ ಶೇಕಡಾ 25ರಷ್ಟು ಲಾಭ ನೀಡುವುದಾಗಿ, ನಷ್ಟವಾದರೆ ಕಂಪನಿಯೇ ಹೊಣೆ ಹೊರುತ್ತದೆ ಎಂದು ನಂಬಿಕೆ ಮೂಡಿಸಿದ್ದ.
ಇದನ್ನು ನಂಬಿದ ದೂರುದಾರರು ಜ.21ರಿಂದ ಫೆ.12ರವರೆಗೆ ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 25,85,312 ರೂ. ಹಣ ವರ್ಗಾವಣೆ ಮಾಡಿದ್ದಾರೆ.
ಆದರೆ ಬಳಿಕ ಹೂಡಿಕೆ ಮೊತ್ತವನ್ನು ಹಿಂತಿರುಗಿಸದೇ ಆರೋಪಿಗಳು ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಆಗ್ರಹಿಸಿದ್ದಾರೆ.







