ಮಣಿಪಾಲ: ಮಣಿಪಾಲದ ಈಶ್ವರನಗರದ ಎಪಿಕೋಡ್ ಸೆಂಟರ್ ಎದುರು ರಾಷ್ಟ್ರೀಯ ಹೆದ್ದಾರಿ 169(A)ರ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ. 8ರಂದು ಯುವಕರ ಗುಂಪೊಂದು ಸಾರ್ವಜನಿಕ ಸ್ಥಳದಲ್ಲಿ ಗುಂಪು ಕಟ್ಟಿಕೊಂಡು ಹೊಡೆದಾಡುತ್ತಿರುವ ದೃಶ್ಯಾವಳಿಗಳು ಇನ್ಸ್ಟಾಗ್ರಾಂ ಹಾಗೂ ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದ್ದವು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯದಲ್ಲಿದ್ದ ಸಿದ್ದೇಶಿ ಜಿ.ಆರ್. ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.ಬಳಿಕ ಸಾರ್ವಜನಿಕರು ಹಾಗೂ ಮಾಹಿತಿದಾರರಿಂದ ವಿಚಾರಣೆ ನಡೆಸಿ ಹೊಡೆದಾಟದಲ್ಲಿ ಭಾಗಿಯಾಗಿದ್ದವರ ಗುರುತನ್ನು ಪತ್ತೆಹಚ್ಚಲಾಗಿದೆ. ಆರ್ಷ್ ಅಮಿತ್ ಶಂಕರ್, ಉತ್ಕರ್ಷ್, ವಿನಾಯಕ ಭಾರದ್ವಾಜ್, ವೇದಾಂತ್ ಶಂಕರ್, ಚೇತನ್, ಅಕ್ಷತ್ ಸಿಂಗ್, ಲಿನ್ ಪೊರ್ಡ್ ಲೆನಾಕ್ಸ್, ಅನುರಾಗ್ ಮುಖರ್ಜಿ, ಶುಭಂ ನಂದಿ, ಅರ್ಜುನ್ ಶಾ, ಪ್ರಜ್ವಲ್ ಹಾಗೂ ಇತರರು ಯಾವುದೋ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಯುವಕರು ರಾಷ್ಟ್ರೀಯ ಹೆದ್ದಾರಿಯ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಹೊಡೆದಾಡಿದ್ದಲ್ಲದೆ, ಬೈಕ್ಗಳನ್ನು ರಸ್ತೆಯಲ್ಲಿ ನಿಲ್ಲಿಸಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಇದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಹಾಗೂ ಭೀತಿ ಉಂಟಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






