ಶಿರ್ವ, ನವೆಂಬರ್ 10: ಗೂಗಲ್ ಪೇಗೆ ಹಣ ಜಮೆಯಾದಂತೆ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹2,49,299.73 ಹಣವನ್ನು ಅಪರಿಚಿತರು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ಕಾಪು ತಾಲೂಕಿನ ಕಳತ್ತೂರು ಗ್ರಾಮದ ಬರೆಬೆಟ್ಟು ಹೊಸಮನೆಯ ವಾಸು ಶೆಟ್ಟಿ (57) ವಂಚನೆಗೊಳಗಾದವರು.
ವಾಸು ಶೆಟ್ಟಿ ಅವರು ಸರಸ್ವತಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಹೊಂದಿರುವ ತಮ್ಮ ವೈಯಕ್ತಿಕ ಕರೆಂಟ್ ಖಾತೆಯನ್ನು ಮೊಬೈಲ್‌ನ ಗೂಗಲ್ ಪೇಗೆ ಲಿಂಕ್ ಮಾಡಿಕೊಂಡು ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ಅ. 9ರಂದು ಸಂಜೆ 5:38ರ ಸುಮಾರಿಗೆ ಅವರ ಖಾತೆಗೆ ‘GROWW VERIFICATION’ ಹೆಸರಿನಲ್ಲಿ ₹0.01 ಜಮೆಯಾಗಿರುವ ಸಂದೇಶ ಬಂದಿದೆ. ಇದನ್ನು ತೆರೆದ ಬಳಿಕ ಸಂಜೆ 6:40ರ ಸುಮಾರಿಗೆ ‘Your channel limit has been modified successfully’ ಎಂಬ ಮತ್ತೊಂದು ಸಂದೇಶ ಬಂದಿದೆ.
ಇದಾದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹1,25,091.15, ₹45,926.69, ₹40,966.82, ₹26,139.77 ಹಾಗೂ ₹6,175.30 ಸೇರಿದಂತೆ ಒಟ್ಟು ₹2,49,299.73 ಹಣ ಕಡಿತಗೊಂಡಿದೆ.
ಅಪರಿಚಿತರು ಗೂಗಲ್ ಪೇಗೆ ಹಣ ಜಮೆಯಾದಂತೆ ಸಂದೇಶ ಕಳುಹಿಸಿ, ಪಿರ್ಯಾದಿದಾರರ ಗಮನಕ್ಕೆ ಬಾರದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






