ಕೋಟ: ಸ್ನೇಹಿತನ ಹೆಸರಿನಲ್ಲಿದ್ದ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ ಹಣದ ಅಗತ್ಯವಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ₹52,000 ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ತೆಕ್ಕಟ್ಟೆಯ ಅನಂತ ಎಂಬವರು ದೂರುದಾರ ದಯಾನಂದ (64) ಅವರ ಸ್ನೇಹಿತರಾಗಿದ್ದು, ಸೆ. 22ರಂದು ಅನಂತ ಅವರ ವಾಟ್ಸಾಪ್ ಖಾತೆಯಿಂದ ತುರ್ತಾಗಿ ಹಣದ ಅಗತ್ಯವಿದೆ ಎಂದು ಸಂದೇಶ ಬಂದಿದೆ. ಜೊತೆಗೆ ₹52,000 ಪಾವತಿಸುವಂತೆ ಕ್ಯೂಆರ್ ಕೋಡ್ ಕಳುಹಿಸಲಾಗಿತ್ತು. ಸ್ನೇಹಿತನೇ ಹಣ ಕೇಳಿದ್ದಾರೆಂದು ನಂಬಿದ ದಯಾನಂದ ಅವರು ತಮ್ಮ ಬ್ಯಾಂಕ್ ಖಾತೆಯಿಂದ ಕಳುಹಿಸಲಾಗಿದ್ದ ಕ್ಯೂಆರ್ ಕೋಡ್ ಮೂಲಕ ₹52,000 ವರ್ಗಾಯಿಸಿದ್ದಾರೆ.
ನಂತರ ಅನಂತರನ್ನು ವಿಚಾರಿಸಿದಾಗ ಅವರ ಮೊಬೈಲ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ದಯಾನಂದ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







