ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ, ನವೆಂಬರ್ 7, 2026: ಉಡುಪಿ ಶ್ರೀಪುತ್ತಿಗೆ ಮಠದ ಪರಮಪೂಜ್ಯ ಯತಿಕುಲ ಚಕ್ರವರ್ತಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಐತಿಹಾಸಿಕ ಚತುರ್ಥ ವಿಶ್ವಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ, ಅಮೆರಿಕದ ಲಾಸ್ ಏಂಜಲೀಸ್ ಮಹಾನಗರದ ಶ್ರೀಪುತ್ತಿಗೆ ಮಠದ ಶಾಖೆಯಾದ ಶ್ರೀವೆಂಕಟಕೃಷ್ಣ ದೇವಾಲಯ (ಶ್ರೀಕೃಷ್ಣ ವೃಂದಾವನ)ದಲ್ಲಿ ಶ್ರೀಪಾದರಿಗೆ ವೈಭವಪೂರ್ಣ ಗುರುವಂದನಾ ಮಹೋತ್ಸವವನ್ನು ಭಕ್ತಿಶ್ರದ್ಧೆಯಿಂದ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಲಾಸ್ ಏಂಜಲೀಸ್‌ನ ಭಾರತದ ಕಾನ್ಸುಲ್ ಜನರಲ್ ಡಾ. ಕೆ. ಜೆ. ಶ್ರೀನಿವಾಸ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಮಹತ್ತರ ಸೇವೆ ಮತ್ತು ಸಾಧನೆಗಳನ್ನು ಪ್ರಶಂಸಿಸಿದರು. ಶ್ರೀಪಾದರ ವಿಶ್ವಗೀತಾ ಪರ್ಯಾಯದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೆರೆದಿದ್ದ ಭಕ್ತರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಇಸ್ಕಾನ್ ಲಾಸ್ ಏಂಜಲೀಸ್ ದೇವಾಲಯದ ಅಧ್ಯಕ್ಷರಾದ ಶ್ರೀ ಸ್ವವಾಸ ದಾಸ್ (Svavasa Das), ಉಪಾಧ್ಯಕ್ಷರಾದ ಶ್ರೀ ನೈಕಾತ್ಮ ದಾಸ್ (Naikatma Das), ಶ್ರೀ ನಾರಾಯಣಸ್ವಾಮಿ ಅಯ್ಯರ್, ಅನಿವಾಸಿ ಭಾರತೀಯರಾದ ಡಾ. ರಾಮಮೋಹನ್ ಹಾಗೂ ಉದ್ಯಮಿಗಳಾದ ಶ್ರೀ ಸುರೇಶ್ ಶ್ರೀನಿವಾಸ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶ್ರೀಪಾದರ ಸಾಧನೆಗಳನ್ನು ಅಭಿನಂದಿಸಿ ಗುರುವಂದನಾ ಮಹೋತ್ಸವಕ್ಕೆ ಶುಭ ಕೋರಿದರು.
ಇಸ್ಕಾನ್ ಸಂಸ್ಥಾಪಕಾಚಾರ್ಯ ಶ್ರೀಲ ಪ್ರಭುಪಾದರಿಂದ 1973ರಲ್ಲಿ ವೈಷ್ಣವ ದೀಕ್ಷೆ ಪಡೆದ ಶ್ರೀ ನೈಕಾತ್ಮ ದಾಸ್ ಅವರು ಹತ್ತು ವರ್ಷಗಳ ಕಾಲ ಬ್ರಹ್ಮಚಾರಿಯಾಗಿ ಭಗವದ್ಗ್ರಂಥಗಳ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಡೆಟ್ರಾಯಿಟ್, ಡೆನ್ವರ್, ಸಿಯಾಟಲ್, ಹ್ಯೂಸ್ಟನ್ ಹಾಗೂ ಸಾನ್ ಹುವಾನ್ ನಗರಗಳ ಇಸ್ಕಾನ್ ದೇವಾಲಯಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಲಾಸ್ ಏಂಜಲೀಸ್ ಇಸ್ಕಾನ್ ದೇವಾಲಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗುರುವಂದನಾ ಸಮಾರಂಭದಲ್ಲಿ ಲಾಸ್ ಏಂಜಲೀಸ್ ಶ್ರೀಕೃಷ್ಣ ವೃಂದಾವನದ ಪ್ರಧಾನ ಅರ್ಚಕರು ಹಾಗೂ ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯರು ಶ್ರೀಪಾದರಿಗೆ ಆರತಿ ಬೆಳಗಿ ಗೌರವ ಸಲ್ಲಿಸಿದರು. ಭಕ್ತಾದಿಗಳು ಪುಷ್ಪಹಾರಗಳನ್ನು ಸಮರ್ಪಿಸಿ ಭಕ್ತಿಪೂರ್ವಕ ಗುರುವಂದನೆ ಸಲ್ಲಿಸಿದರು.
ಗುರುವಂದನೆ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, “ನಮ್ಮ ಚತುರ್ಥ ಶ್ರೀಕೃಷ್ಣ ಪೂಜಾ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಹಾಗೂ ಎನ್‌ಆರ್‌ಐ ಪರ್ಯಾಯವಾಗಿ ಅತ್ಯಂತ ಯಶಸ್ವಿಯಾಗಿ ನೆರವೇರಿಸುವಲ್ಲಿ ವಿಶ್ವದಾದ್ಯಂತ ಇರುವ ಭಕ್ತರ ಸಹಕಾರ ಅಪಾರವಾಗಿದೆ. ನಮ್ಮ ಪರ್ಯಾಯೋತ್ಸವದ ಅಮೆರಿಕ ಸಂಚಾರದ ಸಮಾರೋಪದ ಸಂದರ್ಭದಲ್ಲಿ ನಮಗೆ ಅತ್ಯಂತ ಪ್ರೀತಿಪಾತ್ರವಾದ ಲಾಸ್ ಏಂಜಲೀಸ್ ಶಾಖೆಗೆ ಆಗಮಿಸಿರುವುದು ವಿಶೇಷ ಸಂತೋಷ ತಂದಿದೆ.
ಶ್ರೀಕೃಷ್ಣ ಪೂಜಾ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಶ್ರೀಕೃಷ್ಣನಿಗೆ ಸಲ್ಲಿಸಿದ ಪೂಜೆ ಹಾಗೂ ಸೇವೆಗಳ ಪುಣ್ಯಫಲವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ಎನ್‌ಆರ್‌ಐ ಪರ್ಯಾಯವನ್ನು ಯಶಸ್ವಿಗೊಳಿಸಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಇಲ್ಲಿಗೆ ಬಂದಾಗ ನಮ್ಮ ಸ್ವಂತ ಮನೆಗೆ ಬಂದಂತಹ ಸಂತೋಷವಾಗಿದೆ. ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು. ಶ್ರೀಕೃಷ್ಣನು ಎಲ್ಲರನ್ನೂ ಅನುಗ್ರಹಿಸಲಿ. ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಕೇವಲ ಓದುವುದಕ್ಕೆ ಸೀಮಿತಗೊಳಿಸದೆ, ಅದರ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.
ಬೆಳಿಗ್ಗೆ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಮುದ್ರಾಧಾರಣೆ ಹಾಗೂ ಸಂಸ್ಥಾನ ಪೂಜೆ ನೆರವೇರಿತು. ದೀಪಾವಳಿಯ ಪ್ರಯುಕ್ತ ಶ್ರೀಪಾದರು ನೆರವೇರಿಸಿದ ವಿಶೇಷ ಪೂಜೆಯನ್ನು ಕಣ್ತುಂಬಿಕೊಂಡ ಭಕ್ತರು ಶ್ರೀಕೃಷ್ಣನ ದರ್ಶನ ಪಡೆದು, ಶ್ರೀಪಾದರಿಂದ ಆಶೀರ್ವಾದ ಸ್ವೀಕರಿಸಿದರು. ಬಳಿಕ ಎಲ್ಲರೂ ಪ್ರಸಾದ ಸ್ವೀಕರಿಸಿ ಧನ್ಯರಾದರು.
ಕಾರ್ಯಕ್ರಮದಲ್ಲಿ ಶ್ರೀಪುತ್ತಿಗೆ ಮಠದ ದಿವಾನ ಶ್ರೀ ನಾಗರಾಜ ಆಚಾರ್ಯರು, ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯರು ಹಾಗೂ ಗೀತಾ ಪ್ರಚಾರಕರಾದ ಶ್ರೀ ಪಿ. ಎಸ್. ಆಚಾರ್ಯರು ಉಪಸ್ಥಿತರಿದ್ದರು.
ಶ್ರೀಮಠದ ಅಭಿಮಾನಿ ಹಾಗೂ ಉದ್ಯಮಿಗಳಾದ ಶ್ರೀ ಸುರೇಶ್ ಶ್ರೀನಿವಾಸ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ಗಣ್ಯರನ್ನು ಹಾಗೂ ಭಕ್ತರನ್ನು ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಲಾಸ್ ಏಂಜಲೀಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುವಂದನಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು.







