ಕಾರ್ಕಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ, ಕಾರ್ಕಳ ವಲಯದ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡಬೆಟ್ಟು, ಕುಕ್ಕುಜೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಶಿಕ್ಷಕರಾದ ಡಿ. ಲಕ್ಷ್ಮಣ ಅವರು ಮಾತನಾಡಿ, ಕನ್ನಡ ಭಾಷೆ, ನಾಡು ಮತ್ತು ಸಂಸ್ಕೃತಿಯ ಮಹತ್ವವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗಾಗಿ ಸ್ವತಃ ಕನ್ನಡ ನಾಡಗೀತೆಯನ್ನು ಹಾಡಿ ಮಕ್ಕಳಲ್ಲಿ ಕನ್ನಡಾಭಿಮಾನ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಕೆಪಿಎ ಕಾರ್ಕಳ ವಲಯದ ಅಧ್ಯಕ್ಷರಾದ ಮುನಿಯಾಲು ಪ್ರಮೋದಚಂದ್ರ ಪೈ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಮುನಿಯಾಲು ಅಧ್ಯಕ್ಷರು ಹಾಗೂ ಎಸ್‌ಕೆಪಿಎ ಉಡುಪಿ ವಲಯದ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ದೊಂಡೆರಂಗಡಿ , ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಎಸ್‌ಕೆಪಿಎ ಕಾರ್ಕಳ ವಲಯದ ಪ್ರಧಾನ ಕಾರ್ಯದರ್ಶಿಗಳಾದ ಶೇಖರ್ ಕುಕ್ಕುಜೆ ಮತ್ತು ಎಸ್‌ಕೆಪಿಎ ಕಾರ್ಕಳ ವಲಯದ ಕೋಶಾಧಿಕಾರಿ ವಿ.ಆರ್. ಸತೀಶ್ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಲಯದ ವತಿಯಿಂದ ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕಗಳನ್ನು ವಿತರಿಸುವುದರ ಜೊತೆಗೆ ಫಲಹಾರವನ್ನು ನೀಡಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ಭಾರತೀಯ ಅವರು ವಂದಿಸಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.







