ಉಡುಪಿ: ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಬಳಿಕ ಯುವಕ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ಪೆರ್ಡೂರಿನ ಪ್ರದೀಪ ಮೃತಪಟ್ಟ ಯುವಕ. ಇವರು ಕಳೆದ ಎಂಟು ವರ್ಷಗಳಿಂದ ಶ್ರಾವ್ಯ ಶೆಟ್ಟಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಅಕ್ಟೋಬರ್ 27ರಂದು ರಾತ್ರಿ 10 ಗಂಟೆಯ ಸುಮಾರಿಗೆ ಪ್ರದೀಪ ನಾಯರ್‌ಕೋಡಿನಲ್ಲಿರುವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಶ್ರಾವ್ಯ ಶೆಟ್ಟಿಯ ಸಹೋದರರು ಹಾಗೂ ಇತರರು ಮೂರು ಕಾರುಗಳಲ್ಲಿ ಬಂದು ಅವರನ್ನು ಶ್ರಾವ್ಯ ಅವರ ಮನೆಗೆ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮರುದಿನ ಅಂದರೆ ಅಕ್ಟೋಬರ್ 28ರಂದು ಗಾಯಗೊಂಡಿದ್ದ ಪ್ರದೀಪ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಸಹೋದರನಿಗೆ ಅಕ್ಟೋಬರ್ 27ರಂದು ನಡೆದ ಘಟನೆಯ ಬಗ್ಗೆ ವಿವರಿಸಿದ್ದರು.
ಅಲ್ಲದೆ, ಶ್ರಾವ್ಯ ಶೆಟ್ಟಿ ಹಾಗೂ ಅವರ ಸಹೋದರರು ಬೆದರಿಕೆ ಹಾಕಿರುವುದಾಗಿಯೂ ತಿಳಿಸಿದ್ದರು ಎನ್ನಲಾಗಿದೆ.
ಅಕ್ಟೋಬರ್ 30ರಂದು ಸಂಜೆ 5:30ರ ಸುಮಾರಿಗೆ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಪ್ರದೀಪ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರದೀಪ ಅವರ ಸಾವಿಗೆ ಪ್ರಚೋದನೆ ನೀಡಿರುವ ಆರೋಪದಡಿ ಶ್ರಾವ್ಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ, ಸನತ್, ಹೊರರಾಜ್ಯದ ಇಬ್ಬರು ಕಾರ್ಮಿಕರು ಹಾಗೂ ಇತರರ ವಿರುದ್ಧ ಸಹೋದರ ದಿಲೀಪ್ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಮನಿಸಿ: ಹಲ್ಲೆ, ಬೆದರಿಕೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳು ದೂರಿನಲ್ಲಿ ಉಲ್ಲೇಖಿತವಾಗಿದ್ದು, ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಿದೆ.







