ಉಡುಪಿ: ಮಲ್ಪೆ ಬಂದರಿನ ಧಕ್ಕೆಯಲ್ಲಿ ಕುಸಿದು ಬಿದ್ದ ಮೀನುಗಾರಿಕಾ ದೋಣಿಯ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಅಕ್ಟೋಬರ್ 24ರಂದು ನಡೆದಿದೆ.
ಮೃತರನ್ನು ಗಣೇಶ ಮರಕಲ (59) ಎಂದು ಗುರುತಿಸಲಾಗಿದೆ. ಇವರು ಮಲ್ಪೆಯ ಶ್ರೀ ಸರ್ವೇಶ್ವರ ಕೃಪಾ ಮೀನುಗಾರಿಕಾ ದೋಣಿಯಲ್ಲಿ ಕೆಲಸ ಮಾಡುತ್ತಿದ್ದರು.
ಅಕ್ಟೋಬರ್ 23ರಂದು ರಾತ್ರಿ 11 ಗಂಟೆಗೆ ದೋಣಿಯ ಮಾಲೀಕ ದೇವದಾಸ ಕುಂದರ್ ಹಾಗೂ ಇತರ ಮೂವರೊಂದಿಗೆ ಗಣೇಶ ಮರಕಲ ಅವರು ಮೀನುಗಾರಿಕೆಗೆ ತೆರಳಿದ್ದರು. ಅಕ್ಟೋಬರ್ 24ರಂದು ಬೆಳಗ್ಗೆ 8.30ಕ್ಕೆ ದೋಣಿ ಬಂದರಿಗೆ ಮರಳಿದ್ದು, ಮೀನು ಮಾರಾಟ ಮಾಡಿದ ಬಳಿಕ ದೋಣಿಯ ಮಾಲೀಕರು ಮನೆಗೆ ತೆರಳಿದ್ದರು. ಗಣೇಶ ಮರಕಲ ಅವರು ಬಂದರಿನ ಧಕ್ಕೆಯಲ್ಲೇ ಉಳಿದಿದ್ದರು.
ಮಧ್ಯಾಹ್ನ 2 ಗಂಟೆಗೆ ಸುಧಾಕರ ಎಂಬವರು ಕರೆ ಮಾಡಿ ಗಣೇಶ ಮರಕಲ ಅವರು ಬಂದರಿನ ಧಕ್ಕೆಯಲ್ಲಿ ಕುಸಿದು ಬಿದ್ದಿರುವುದಾಗಿ ದೇವದಾಸ ಕುಂದರ್ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಅವರು, ಗಣೇಶ ಮರಕಲ ಅವರನ್ನು ಆಂಬುಲೆನ್ಸ್ ಮೂಲಕ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಆದರೆ, ಪರೀಕ್ಷಿಸಿದ ವೈದ್ಯರು ಮಧ್ಯಾಹ್ನ 3.35ಕ್ಕೆ ಗಣೇಶ ಮರಕಲ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







