ನವದೆಹಲಿ, ಅ. 26: ಐಡಿಬಿಐ ಬ್ಯಾಂಕಿನ ಶೇ. 60.72ರಷ್ಟು ಷೇರುಗಳನ್ನು ಕೆನಡಾ ಮೂಲದ ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಗೆ ಮಾರಾಟ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ವಿರೋಧಿಸಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣದಿಂದ ಸಾಮಾನ್ಯ ಜನರು, ಸಣ್ಣ ಠೇವಣಿದಾರರು ಹಾಗೂ ಸಾಮಾಜಿಕ ವಲಯದ ಸಾಲ ಸೌಲಭ್ಯಗಳ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಪಕ್ಷ ಆತಂಕ ವ್ಯಕ್ತಪಡಿಸಿದೆ.
ವಿದೇಶಿ ಸಂಸ್ಥೆಗಳು ಭಾರತೀಯ ಬ್ಯಾಂಕುಗಳಲ್ಲಿ ಶೇ. 26ಕ್ಕಿಂತ ಹೆಚ್ಚು ಮತದಾನದ ಹಕ್ಕುಗಳನ್ನು ಹೊಂದಬಾರದು ಎಂಬ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಉಲ್ಲೇಖಿಸಿರುವ ಸಿಪಿಐ(ಎಂ), ಐಡಿಬಿಐ ಬ್ಯಾಂಕ್‌ನ ಷೇರು ಮಾರಾಟವು ನಿಯಮಗಳಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದೆ. ಫೇರ್‌ಫ್ಯಾಕ್ಸ್ ಈಗಾಗಲೇ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನಲ್ಲಿ ಶೇ. 40ರಷ್ಟು ಷೇರುಗಳನ್ನು ಹೊಂದಿರುವುದನ್ನೂ ಪಕ್ಷ ಪ್ರಸ್ತಾಪಿಸಿದೆ.
ಐಡಿಬಿಐ ಬ್ಯಾಂಕ್ ಈ ಹಿಂದೆ ಸತತ ಐದು ವರ್ಷಗಳ ಕಾಲ ನಷ್ಟ ಅನುಭವಿಸಿತ್ತು. ಬಳಿಕ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶೇ. 51ರಷ್ಟು ಷೇರುಗಳನ್ನು ಖರೀದಿಸಿದ ನಂತರ ಬ್ಯಾಂಕ್ ಚೇತರಿಸಿಕೊಂಡು ಲಾಭದ ಹಾದಿಗೆ ಮರಳಿದೆ. ಹೀಗಿರುವಾಗ, ಸಾರ್ವಜನಿಕ ಹೂಡಿಕೆಯಿಂದ ಚೇತರಿಸಿಕೊಂಡಿರುವ ಬ್ಯಾಂಕಿನ ನಿಯಂತ್ರಣವನ್ನು ಖಾಸಗಿ ವಿದೇಶಿ ಸಂಸ್ಥೆಗೆ ವರ್ಗಾಯಿಸುವ ಅಗತ್ಯವೇನು ಎಂದು ಸಿಪಿಐ(ಎಂ) ಪ್ರಶ್ನಿಸಿದೆ.
ಇದಲ್ಲದೆ, ಫೇರ್‌ಫ್ಯಾಕ್ಸ್‌ಗೆ ಅನುಕೂಲವಾಗುವಂತೆ ಐಡಿಬಿಐ ಬ್ಯಾಂಕಿನ ಷೇರುಗಳ ಮೌಲ್ಯಮಾಪನವನ್ನು ಕಡಿಮೆ ಮಾಡಲಾಗಿದೆ ಎಂದು ಪಕ್ಷ ಆರೋಪಿಸಿದೆ. ಫೇರ್‌ಫ್ಯಾಕ್ಸ್ ಮತ್ತು ಅದರ ಲೆಕ್ಕಪರಿಶೋಧಕರಿಗೆ ಈ ಹಿಂದೆ ವಿವಿಧ ವಿವಾದಗಳಿಗೆ ಸಂಬಂಧಿಸಿದಂತೆ ₹50 ಲಕ್ಷ ದಂಡ ವಿಧಿಸಲಾಗಿತ್ತು ಎಂದೂ ಹೇಳಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಂತಹ ಲಾಭದಾಯಕ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ನೀತಿ ಆಯೋಗ ಶಿಫಾರಸು ಮಾಡಿದೆ ಎಂಬ ವರದಿಗಳ ಬಗ್ಗೆಯೂ ಸಿಪಿಐ(ಎಂ) ಕಳವಳ ವ್ಯಕ್ತಪಡಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವುದರ ಜೊತೆಗೆ ಸಾಮಾಜಿಕ ವಲಯಗಳಿಗೆ ಸಾಲ ಸೌಲಭ್ಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಸಮಾನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಲ್ಲ ವರ್ಗದ ಜನರಿಗೆ ಸಾಲ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಖಾಸಗೀಕರಣದಿಂದ ಈ ಉದ್ದೇಶಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.
ಆದ್ದರಿಂದ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಷೇರುಗಳನ್ನು ಹಿಂತೆಗೆದುಕೊಳ್ಳುವ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಒತ್ತಾಯಿಸಿದೆ.
ಸುರೇಶ್ ಕಲ್ಲಾಗರ
ಕಾರ್ಯದರ್ಶಿ







