ಉಡುಪಿಯ ಉಚ್ಚಿಲದಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಕರಾವಳಿಯ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ಐದನೇ ವರ್ಷದ ಉಚ್ಚಿಲ ದಸರಾ-2026ಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆತಿದೆ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವತಿಯಿಂದ ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಉತ್ಸವಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಚಾಲನೆ ನೀಡಿದರು.
ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿರುವ ಈ ಉತ್ಸವದಲ್ಲಿ 11 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಭಕ್ತರು ಮತ್ತು ಸಾರ್ವಜನಿಕರನ್ನು ಆಕರ್ಷಿಸಲಿವೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ನವರಾತ್ರಿ ಹಬ್ಬವು ನಮ್ಮೊಳಗಿನ ಶಕ್ತಿ, ಧೈರ್ಯ ಮತ್ತು ಜ್ಞಾನವನ್ನು ಜಾಗೃತಗೊಳಿಸುವ ಪವಿತ್ರ ಸಂದರ್ಭವಾಗಿದೆ. ದೇವಿಯ ಆರಾಧನೆಯೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಂಡು ಜೀವನದಲ್ಲಿ ಸಕಾರಾತ್ಮಕವಾಗಿ ಮುನ್ನಡೆಯಬೇಕು ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ನಾಡೋಜ ಡಾ. ಜಿ. ಶಂಕರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ ಇಂದು ವಿಶೇಷ ಜನಮನ್ನಣೆ ಗಳಿಸಿದೆ. ದೇವಿಯ ಕೃಪೆಯಿಂದ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಅದ್ದೂರಿ ದಸರಾ ಆಚರಣೆಯ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಆರಂಭವಾದ ಉಚ್ಚಿಲ ದಸರಾ ಇಂದು ವರ್ಷದಿಂದ ವರ್ಷಕ್ಕೆ ಹೆಚ್ಚು ವೈಭವ ಪಡೆದುಕೊಳ್ಳುತ್ತಿದೆ. ಧಾರ್ಮಿಕ ಆಚರಣೆಗಳ ಜತೆಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಉತ್ಸವ ಜನಾಕರ್ಷಣೆ ಗಳಿಸುತ್ತಿದೆ ಎಂದರು.
ಅಕ್ಟೋಬರ್ 12ರಂದು ನಡೆಯಲಿರುವ ಮಹಿಳಾ ದಸರಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಬೇಕಿತ್ತು. ಆದರೆ, ತುರ್ತು ಕೆಲಸದ ನಿಮಿತ್ತ ದೆಹಲಿಗೆ ತೆರಳಬೇಕಿರುವುದರಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ 21ರೊಳಗೆ ಉಚ್ಚಿಲಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಸೊರಕೆ ಮಾಹಿತಿ ನೀಡಿದರು.
ಇದೇ ವೇಳೆ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಉತ್ಸವದ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದಸರಾ ವಸ್ತುಪ್ರದರ್ಶನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ದಸರಾ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಕರ್ಕೇರ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
11 ದಿನಗಳ ಕಾಲ ನಡೆಯಲಿರುವ ಉಚ್ಚಿಲ ದಸರಾ ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ವೈಭವ ಹಾಗೂ ನವರಾತ್ರಿ ಸಂಭ್ರಮದೊಂದಿಗೆ ಕರಾವಳಿಯ ಜನರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ.

ಚಿತ್ರ ಕೃಪೆ: ಸಚಿನ್ ಉಚ್ಚಿಲ







