ಉಡುಪಿ, ಅ.5: ಗೂಡಂಗಡಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಬಲವಂತವಾಗಿ ಹಿಡಿದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾದ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡವೂರು ಗ್ರಾಮದ ವಿಠಲ ಸುವರ್ಣ (76) ಅವರು ಕಡವಿನ ಬಾಗಿಲು ವಿಠೋಭ ರುಖುಮಾಯಿ ಭಜನಾ ಮಂದಿರದ ಬಳಿ ಸುಮಾರು 50 ವರ್ಷಗಳಿಂದ ಗೂಡಂಗಡಿ ನಡೆಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ.
ಅ.4ರಂದು ಎಂದಿನಂತೆ ಗೂಡಂಗಡಿ ತೆರೆದಿದ್ದ ವೇಳೆ ಮಧ್ಯಾಹ್ನ ಸುಮಾರು 1 ಗಂಟೆಗೆ ಇಬ್ಬರು ವ್ಯಕ್ತಿಗಳು ಮೋಟಾರ್ ಸೈಕಲ್‌ನಲ್ಲಿ ಬಂದು ಅಂಗಡಿಯ ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿದ್ದಾರೆ. ಬಳಿಕ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಅಂಗಡಿಗೆ ಬಂದು ವಿಮಲ್ ನೀಡುವಂತೆ ಕೇಳಿ ₹20 ನೀಡಿದ್ದಾನೆ.
ವಿಠಲ ಸುವರ್ಣ ಅವರು ಡಬ್ಬಿಯಿಂದ ವಿಮಲ್ ತೆಗೆದುಕೊಳ್ಳುತ್ತಿದ್ದ ವೇಳೆ, ಆ ಅಪರಿಚಿತ ವ್ಯಕ್ತಿ ಅವರನ್ನು ಕೈಗಳಿಂದ ಬಲವಂತವಾಗಿ ಹಿಡಿದು, ಕುತ್ತಿಗೆಯಲ್ಲಿದ್ದ ಸುಮಾರು 1.5 ಪವನ್ ತೂಕದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ಬಳಿಕ ಹೊರಗೆ ನಿಂತಿದ್ದ ಮೋಟಾರ್ ಸೈಕಲ್ ಏರಿ ಇಬ್ಬರೂ ಪರಾರಿಯಾಗಿದ್ದಾರೆ.
ಘಟನೆಯ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







