ಕಾರ್ಕಳ, ಅ.5: ಅತೀವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಬೈಕ್‌ವೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪುಲ್ಕೇರಿ ಪಡುತಿರುಪತಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಅ.4ರಂದು ಸಂಜೆ ಸುಮಾರು 6.20ರ ವೇಳೆಗೆ ಘಟನೆ ನಡೆದಿದ್ದು, ನಿಟ್ಟೆ ಕಡೆಯಿಂದ ಪುಲ್ಕೇರಿ ಕಡೆಗೆ ಹೊಸ ಹೋಂಡಾ ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದ ವಿಘ್ನೇಶ ಆಚಾರ್ಯ (25) ಎಂಬವರು, ಅದೇ ದಿಕ್ಕಿನಲ್ಲಿ ವಸಂತ ಸೇರಿಗಾರ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಸಂಜೆ 7.06ಕ್ಕೆ ವಿಘ್ನೇಶ ಆಚಾರ್ಯ ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







