ಮಣಿಪಾಲ, ಸೆಪ್ಟೆಂಬರ್ 26, 2026: ನಾವೀನ್ಯ, ಉದ್ಯಮಶೀಲತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾದ ಮಣಿಪಾಲ ಸ್ಟಾರ್ಟ್‌ಅಪ್ ಎಕ್ಸ್‌ಪೋ-2026 ಸಮಾವೇಶವು ಸೆಪ್ಟೆಂಬರ್ 29, 2026ರಂದು ಮಣಿಪಾಲದ ಮಾಹೆಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆಯಲಿದೆ. ಮಣಿಪಾಲ–ಕರ್ನಾಟಕ ಸರ್ಕಾರ ಬಯೋಇನ್‌ಕ್ಯುಬೇಟರ್ (ಎಂಜಿಒಕೆಬಿ) ಮತ್ತು ಮಣಿಪಾಲ ಯೂನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್ (ಮುಟ್‌ಬಿ) ಜಂಟಿಯಾಗಿ ಆಯೋಜಿಸುತ್ತಿರುವ ಈ ಕಾರ್ಯಕ್ರಮವು ಭಾರತದಲ್ಲಿ ಪ್ರಗತಿ ಹೊಂದುತ್ತಿರುವ ವಿವಿಧ ನವ ಉದ್ಯಮ ಕ್ಷೇತ್ರಗಳ ಪ್ರವರ್ತಕರನ್ನು ಒಂದೇ ವೇದಿಕೆಗೆ ತರಲಿದೆ.
ಉದ್ಯಮ ಉಪಕ್ರಮಗಳು, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇಎಸ್), ವಿದ್ಯಾರ್ಥಿ ನವೋದ್ಯಮಿಗಳು, ಹೂಡಿಕೆದಾರರು, ಉದ್ಯಮಗಳ ಪ್ರವರ್ತಕರು, ಶಿಕ್ಷಣವೇತ್ತರು, ಕೈಗಾರಿಕಾ ನೀತಿ ನಿರೂಪಕರು ಹಾಗೂ ನವೋದ್ಯಮ ಪರಿಸರ ವ್ಯವಸ್ಥೆಯ ವಿವಿಧ ಸಂಸ್ಥೆಗಳು ತಮ್ಮ ನವೀನ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲು, ವಿಚಾರ ವಿನಿಮಯ ಮಾಡಿಕೊಳ್ಳಲು, ಸಹಭಾಗಿತ್ವದ ಅವಕಾಶಗಳನ್ನು ಅನ್ವೇಷಿಸಲು, ವ್ಯವಹಾರ ಮತ್ತು ಹೂಡಿಕೆ ಸಂಬಂಧಗಳನ್ನು ವೃದ್ಧಿಸಲು ಈ ಎಕ್ಸ್‌ಪೋ ಅವಕಾಶ ನೀಡಲಿದೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಮತ್ತು ಕರ್ನಾಟಕ ಸರ್ಕಾರ ಸಂಯುಕ್ತವಾಗಿ ಸ್ಥಾಪಿಸಿರುವ ಎಂಜಿಒಕೆಬಿ ಘಟಕವು ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಯನ್ನು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಬಿಸಿನೆಸ್ ಇನ್‌ಕ್ಯುಬೇಟರ್ ಆಗಿದೆ. ನವೋದ್ಯಮಗಳು ಪರಿಕಲ್ಪನಾತ್ಮಕ ಹಂತದಿಂದ ಇನ್‌ಕ್ಯುಬೇಶನ್, ಉತ್ಪನ್ನ ಅಭಿವೃದ್ಧಿ, ಮೌಲ್ಯಮಾಪನ ಹಾಗೂ ವಾಣಿಜ್ಯೀಕರಣದವರೆಗೆ ಬೆಳೆಯುವಲ್ಲಿ ಎಂಜಿಒಕೆಬಿ ನೆರವು ನೀಡುತ್ತಿದೆ.
ಮಣಿಪಾಲ ಸ್ಟಾರ್ಟ್‌ಅಪ್ ಎಕ್ಸ್‌ಪೋ 2026 ಪ್ರಮುಖ ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆಗೊಳ್ಳುತ್ತಿದ್ದು, ಇದರಲ್ಲಿ ಮಾಹೆಯ ಮಿಡಾಸ್ [ಎಂಐಡಿಎಎಸ್- ಮೆಡಿಕಲ್ ಇನ್‌ಸ್ಟ್ರುಮೆಂಟ್, ದಿವೈಸಸ್ ಮತ್ತು ಎಲೈಡ್ ಸರ್ವಿಸಸ್], ಡಿಎಸ್‌ಟಿ ಮಾಹೆ ಹಬ್ ಆ್ಯಂಡ್ ಇನ್ನೋವೇಶನ್ ಸೆಂಟರ್ ಗಳು ಪ್ರಮುಖ ಪಾಲುದಾರ ಸಂಸ್ಥೆಗಳಾಗಿವೆ. ಜೊತೆಗೆ, ಟೈ [ಟಿಐಇ] ಮಂಗಳೂರು, ಅಸೋಸಿಯೇಶನ್ ಆಫ್ ಬಯೋಟೆಕ್ನಾಲಜಿ ಲೆಡ್ ಎಂಟರ್‌ಪ್ರೈಸಸ್ [ಎಬಿಎಲ್‌ಇ], ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ [ಕೆಸಿಸಿಐ], ಐಬಯೋಎಂ ಮತ್ತು ಕರ್ನಾಟಕ ಡಿಜಿಟಲ್ ಅಕಾಡೆಮಿ ಮಿಶನ್ [ಕೆಡಿಇಎಂ] ಸಂಸ್ಥೆಗಳು ಕೂಡ ಈ ಸಮಾವೇಶದ ಆಯೋಜನೆಯಲ್ಲಿ ಕೈಜೋಡಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ [ಎಸ್‌ಬಿಐ] ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಈ ಸಮಾವೇಶದ ಬ್ಯಾಂಕಿಂಗ್ ಪಾಲುದಾರರಾಗಿದ್ದು, ಸೇಜೋಲ್ ಸೊಲುಶನ್ಸ್, ಬೆಕನ್ [ಬೆಸ್ಟ್ ಇಂಜಿನಿಯರಿಂಗ್ ಏಯಿಡ್ಸ್ ೠ ಕನ್ಸಲ್ಟೇನ್ಸೀಸ್ ಲಿ. ಸೇರಿದಂತೆ ಹಲವು ಸಂಸ್ಥೆಗಳು ಔದ್ಯಮಿಕ ಪಾಲುಗಾದರರಾಗಿ ಸಹಕರಿಸುತ್ತಿವೆ.
ಮಣಿಪಾಲ ಸ್ಟಾರ್ಟ್‌ಅಪ್ ಎಕ್ಸ್‌ಪೋ 2026 ಔದ್ಯಮಿಕ ವಲಯದಲ್ಲಿ ವಿಶಿಷ್ಟ ಅವಕಾಶಗಳಿಗೆ ವೇದಿಕೆಯಾಗಲಿದೆ. ಸ್ಟಾರ್ಟ್‌ಅಪ್-ನವೋದ್ಯಮಗಳ ಪ್ರವರ್ತಕರು, ಕಾರ್ಪೊರೇಟ್ ಸಂಸ್ಥೆಗಳ ಪಾಲುದಾರರು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಪ್ರತಿನಿಧಿಗಳು, ಹೂಡಿಕೆದಾರರು ಮಣಿಪಾಲ ಸ್ಟಾರ್ಟ್‌ಅಪ್ ಎಕ್ಸ್‌ಪೋ 2026ರಲ್ಲಿ ಭಾಗವಹಿಸಬಹುದಾಗಿದೆ. ನೋಂದಣಿ ಪ್ರಕ್ರಿಯೆ ಸೆಪ್ಟೆಂಬರ್ 25, 2026ರವರೆಗೆ ಮುಕ್ತವಾಗಿರುತ್ತದೆ.







