ಕುಂದಾಪುರ, ಸೆ.28: ಎರಡು ಕಾಲುಗಳು ಪೋಲಿಯೋ ಪೀಡಿತವಾಗಿದ್ದ ಅಂಗವಿಕಲ ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವಲ್ಕುಂದ ಗ್ರಾಮದಲ್ಲಿ ಸೆ.27ರಂದು ನಡೆದಿದೆ.
ಮೃತರನ್ನು ಮಂಜಿ (61) ಎಂದು ಗುರುತಿಸಲಾಗಿದೆ. ಅವರು ಎರಡು ಕಾಲುಗಳ ಪೋಲಿಯೋದಿಂದ ಅಂಗವಿಕಲರಾಗಿದ್ದು, ಕಳೆದ ಎರಡು ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದರು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಸೆ.27ರಂದು ಮಧ್ಯಾಹ್ನ 3.30ರಿಂದ 4.10ರ ನಡುವಿನ ಅವಧಿಯಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಂಜಿ ಅವರು ಮನೆಯ ಮಾಡಿಗೆ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ. ಪಕ್ಕದ ಮನೆಯವರು ಇದನ್ನು ಗಮನಿಸಿ ಅವರ ಸಹೋದರಿ ಸಹನಾ ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಮಂಜಿ ಅವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಂಜೆ 4.35ಕ್ಕೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







