ಬ್ರಹ್ಮಾವರ, ಸೆ.28: ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬ್ರಹ್ಮಾವರದಲ್ಲಿ ಸೆ.27ರಂದು ರಾತ್ರಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಕಿಶೋರ್ ಮೊಹಂತಿ ಅವರು ಕನಯ್ಯ ಕುಮಾರ್ ರಾಯಿ, ಬಿಷ್ಣು ಸರಕಾರ್ ಹಾಗೂ ಗೋಪಿ ಅವರೊಂದಿಗೆ ಹಂಗಾರಕಟ್ಟೆ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸೆ.27ರಂದು ರಾತ್ರಿ ನಾಲ್ವರೂ ಊಟಕ್ಕಾಗಿ ವಾರಂಬಳ್ಳಿ ಗ್ರಾಮದ ಬ್ರಹ್ಮಾವರದ ರಾಯಲ್ ಇನ್ ಎದುರಿನ ಬಿರಿಯಾನಿ ಪಾಯಿಂಟ್‌ಗೆ ಬಂದಿದ್ದರು.
ಈ ವೇಳೆ ಕಿಶೋರ್ ಮೊಹಂತಿ ಅವರು ಊಟವನ್ನು ಪಾರ್ಸೆಲ್ ತೆಗೆದುಕೊಂಡು ಮಹೇಶ್ ಆಸ್ಪತ್ರೆಗೆ ಮಾತ್ರೆ ತರಲು ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗಿದ್ದರು. ಬಳಿಕ ರಾತ್ರಿ ಸುಮಾರು 8 ಗಂಟೆಗೆ ವಾಪಸ್ ಬಿರಿಯಾನಿ ಪಾಯಿಂಟ್ ಕಡೆಗೆ ಬರುತ್ತಿದ್ದಾಗ, ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುವ ಏಕಮುಖ ರಸ್ತೆಯನ್ನು ದಾಟಿ, ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಸಾಗುವ ರಸ್ತೆಯ ಎಡ ಅಂಚಿಗೆ ಬಂದಿದ್ದರು.
ಅದೇ ವೇಳೆ ಕಾರನ್ನು ಚಾಲಕ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಿಶೋರ್ ಮೊಹಂತಿ ಅವರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ಪರಿಣಾಮ ಕಿಶೋರ್ ಮೊಹಂತಿ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಪಕ್ಕದಲ್ಲಿದ್ದ ಮಹೇಶ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 8.55ಕ್ಕೆ ಮೃತಪಟ್ಟಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







