ಕೋಟ: ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮದ ಬಳಿಕ ಯುವಕನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದ ಮಂದರತಿ ನಿಲಯ ಮಕ್ಕಿಬೆಟ್ಟು ನಿವಾಸಿ ಮಧು ಕೆ. ಕುಮಾರ್ (25) ಅವರು ಸೆಪ್ಟೆಂಬರ್ 16ರಂದು ತೆಕ್ಕಟ್ಟೆ ಗ್ರಾಮದ ಕಣ್ಣುಕೆರೆಯಲ್ಲಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮಕ್ಕೆ ತಮ್ಮ ಸಹೋದರ ಮನು ಕೆ. ಕುಂದರ್ ಹಾಗೂ ಸ್ನೇಹಿತರೊಂದಿಗೆ ತೆರಳಿದ್ದರು.
ಗಣೇಶೋತ್ಸವ ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ಸುಮಾರು 11.30ಕ್ಕೆ ದೇವಸ್ಥಾನದ ಹಾಲ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಅಖಿಲೇಶ್ ಎಂಬಾತ ಮಧು ಅವರನ್ನು ಕರೆದು, ವಿಶುಕುಮಾರ್‌ನೊಂದಿಗೆ ಮಾತನಾಡಿಸಿ ಹಿಂದಿನ ಜಗಳವನ್ನು ಬಗೆಹರಿಸುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಅದರಂತೆ ಹೊರಗೆ ಬಂದಾಗ ವಿಶುಕುಮಾರ್ ಬಳಿ ಕ್ಷಮೆ ಕೇಳುವಂತೆ ತಿಳಿಸಿದ್ದು, ಮಧು ಅವರು “ಸಾರಿ, ತಪ್ಪಾಯಿತು” ಎಂದು ಹೇಳಿದಾಗ ವಿಶುಕುಮಾರ್ ಏಕಾಏಕಿ ಅಡ್ಡಗಟ್ಟಿ ಕೈಯಿಂದ ಎದೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ಮಧು ಅವರ ಸಹೋದರ ಮನು ಅವರಿಗೂ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದು, “ತಿರುಗಾಡಲು ಬಿಡುವುದಿಲ್ಲ, ಚೂರಿಯಿಂದ ಇರಿದು ಕೊಲೆ ಮಾಡುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ವಿಶುಕುಮಾರ್ ಬೆಟ್ಟಿಂಗ್ ಆಡಿಸುತ್ತಿದ್ದಾನೆ, ಆತನೊಂದಿಗೆ ಹೋಗಬೇಡ ಎಂದು ಮಧು ಅವರು ತಮ್ಮ ಸ್ನೇಹಿತನಿಗೆ ಹಿಂದಿನಿಂದಲೂ ಹೇಳುತ್ತಿದ್ದುದೇ ಗಲಾಟೆಗೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.






