ಉಡುಪಿ: ವಿವಾಹದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಪತಿ ಹಾಗೂ ಅತ್ತೆಯ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಟ್ಪಾಡಿಯ ನಂದನವನ ನಿವಾಸಿ 28 ವರ್ಷದ ನಿಖಿತಾ ಗ್ರೇಸ್ ಜೋಶ್ವ ಅವರು 2025ರ ಜುಲೈ 27ರಂದು ಯು.ಬಿ.ಎಂ. ಸಿಜುಬಿಲೀ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿಲ್ಸನ್ ಪ್ರಿನ್ಸಸ್ ಡಿಸಿಲ್ವ ಅವರನ್ನು ವಿವಾಹವಾಗಿದ್ದರು. ವಿವಾಹದ ಮೊದಲು ತಮ್ಮ ದತ್ತು ಸ್ವೀಕಾರದ ವಿಚಾರ ಹಾಗೂ ಹಿಂದಿನ ನಿಶ್ಚಿತಾರ್ಥದ ಬಗ್ಗೆ ಪತಿಗೆ ತಿಳಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ವಿವಾಹದ ಬಳಿಕ ಪತಿ ಈ ಹಿಂದಿನ ವಿಚಾರಗಳನ್ನು ಮುಂದಿಟ್ಟುಕೊಂಡು ಅನುಮಾನ ವ್ಯಕ್ತಪಡಿಸುತ್ತಿದ್ದು, ಕುಟುಂಬದವರು ಹಾಗೂ ಮುಂಬೈಗೆ ತೆರಳಿದ್ದ ಸಂದರ್ಭದಲ್ಲಿಯೂ ಈ ವಿಚಾರಗಳನ್ನು ಪ್ರಸ್ತಾಪಿಸಿ ತಮ್ಮ ಗೌರವಕ್ಕೆ ಧಕ್ಕೆ ಉಂಟುಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಮೇ 13, 2026ರಂದು ಪತಿ ಜಗಳ ಮಾಡಿ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಮುಖಕ್ಕೆ ಉಗುಳಿ ಅವಮಾನಿಸಿದ್ದಾರೆ. ಈ ವೇಳೆ ಅತ್ತೆಯೂ ಪತಿಗೆ ಸಹಕರಿಸಿ ಮನೆಯಿಂದ ಹೊರಗೆ ಹಾಕಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಗಳದ ಸಂದರ್ಭದಲ್ಲಿ ಪತಿ ಜೀವ ಬೆದರಿಕೆಯನ್ನೂ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಸಂಬಂಧ ಉಡುಪಿ ಮಹಿಳಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2026ರಂತೆ BNS ಕಾಯ್ದೆಯ ಕಲಂ 85, 115, 352, 351(3) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







