ಕಾರ್ಕಳ: ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ದ ಪೂರ್ವಭಾವಿ ಸಭೆ ಕಾರ್ಕಳದ ವಿಕಾಸದಲ್ಲಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ನಿಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಅಭಿಯಾನ’ ನಡೆಯಲಿದ್ದು, ಈ ಅವಧಿಯಲ್ಲಿ 13 ವಿಭಿನ್ನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಅಭಿಯಾನದ ಆರಂಭದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ ದೀಪ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಫಲಾನುಭವಿಗಳ ಮನೆಗಳಲ್ಲಿ ದೇವರ ಮುಂದೆ ದೀಪ ಬೆಳಗಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯುಷ್ಯ, ಆರೋಗ್ಯ, ಶಕ್ತಿ ಹಾಗೂ ಜನಸೇವೆ ಮಾಡುವ ಭಾಗ್ಯ ದೊರೆಯಲಿ ಮತ್ತು ದೇಶದ ಅಭಿವೃದ್ಧಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ, ಜನರ ಆಶೀರ್ವಾದ ಪಡೆಯುವ ಸಂಕಲ್ಪ ಮಾಡುವಂತೆ ಕಾರ್ಯಕರ್ತರಿಗೆ ತಿಳಿಸಲಾಯಿತು.
2001ರಿಂದ ಆರಂಭಗೊಂಡ ಜನಸೇವೆಯ ಪಯಣಕ್ಕೆ 25 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಧಿಯಿಂದ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಅವರ ‘ಜನಸೇವೆಯಿಂದ ರಾಷ್ಟ್ರಸೇವೆ’ ಎಂಬ ಧ್ಯೇಯ ಹಾಗೂ ಸಮರ್ಪಣಾ ಭಾವವನ್ನು ಗೌರವಿಸುವ ನಿಟ್ಟಿನಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸೆಪ್ಟೆಂಬರ್ 17ರಿಂದ ಆರಂಭವಾಗುವ ‘ಸೇವಾ ಸಂಕಲ್ಪ ಅಭಿಯಾನ’ದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಸಕ್ರಿಯವಾಗಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಅವರು ಸಭೆಗೆ ಅಗತ್ಯ ಮಾಹಿತಿ ನೀಡಿದರು. ಹಿರಿಯರಾದ ಜಯರಾಮ್ ಸಾಲ್ಯಾನ್, ಸೂರ್ಯಕಾಂತ್ ಶೆಟ್ಟಿ ಹಾಗೂ ಅಂಥೋನಿ ಡಿಸೋಜ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಮತ್ತು ಸತೀಶ್ ಪೂಜಾರಿ ಉಪಸ್ಥಿತರಿದ್ದರು.
ಮಂಡಲ ಕಾರ್ಯದರ್ಶಿ ಕರುಣಾಕರ್ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







