ಶಿರ್ವ: ದೇವಸ್ಥಾನದ ಬಾಗಿಲಿನ ಚಿಲಕ ಹಾಗೂ ಗರ್ಭಗುಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ದೇವರ ಮೂರ್ತಿಗಳಿಗೆ ತೊಡಿಸಿದ್ದ ಬೆಳ್ಳಿ ಮುಖವಾಡಗಳು ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ಕಳವು ಮಾಡಿರುವ ಘಟನೆ ಬೆಳಪು ಗ್ರಾಮದಲ್ಲಿ ನಡೆದಿದೆ.
ಬೆಳಪು ಗ್ರಾಮದ ಬ್ರಹ್ಮಲಿಂಗೇಶ್ವರ ಮತ್ತು ಖಡ್ಗೇಶ್ವರಿ ದೇವಸ್ಥಾನದಲ್ಲಿ ಆ.24ರಂದು ಸಂಜೆ 6.30ರ ಸುಮಾರಿಗೆ ಬಾಗಿಲು ಹಾಕಿ ಭದ್ರಪಡಿಸಲಾಗಿತ್ತು
ಆ.25ರಂದು ಬೆಳಿಗ್ಗೆ 7.30ರ ಸುಮಾರಿಗೆ ಗಣೇಶ್ ದೇವಾಡಿಗ ಎಂಬವರು ದೇವಸ್ಥಾನದ ಎದುರಿನ ಬಾಗಿಲು ಅರ್ಧ ತೆರೆದಿರುವುದನ್ನು ಗಮನಿಸಿ ದೇವಸ್ಥಾನದ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದಾರೆ.
ನಂತರ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ರಾವ್ (50) ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಯಾರೋ ಕಳ್ಳರು ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಗರ್ಭಗುಡಿಯ ಬೀಗವನ್ನೂ ಮುರಿದಿರುವುದು ಕಂಡುಬಂದಿದೆ.
ಗರ್ಭಗುಡಿಯಲ್ಲಿದ್ದ ಎರಡು ದೇವರ ಮೂರ್ತಿಗಳಿಗೆ ತೊಡಿಸಿದ್ದ ಬೆಳ್ಳಿ ಮುಖವಾಡಗಳನ್ನು ಹಾಗೂ ದೇವಸ್ಥಾನದ ಪ್ರಾಂಗಣದಲ್ಲಿದ್ದ ಕಾಣಿಕೆ ಡಬ್ಬಿಯ ಬೀಗ ಮುರಿದು ಅದರಲ್ಲಿದ್ದ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ.
ಕಳುವಾದ ಬೆಳ್ಳಿ ಮುಖವಾಡಗಳ ಅಂದಾಜು ಮೌಲ್ಯ ₹1.30 ಲಕ್ಷ ಎಂದು ತಿಳಿದುಬಂದಿದ್ದು, ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣದ ನಿಖರ ಮೊತ್ತ ತಿಳಿದುಬಂದಿಲ್ಲ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 73/2026, ಕಲಂ 305, 331 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







