ಮಣಿಪಾಲ, ಸೆಪ್ಟೆಂಬರ್ 7, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಭಾರತ ಮತ್ತು ಅಮೆರಿಕ ನಡುವಿನ ವೈಜ್ಞಾನಿಕ ಹಾಗೂ ತಾಂತ್ರಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಕಾರ್ಯಕ್ರಮವಾದ ‘ಯುಎಸ್ ಇಂಡಿಯ ಟ್ರಸ್ಟ್ ಫೆಲೋಶಿಪ್ 2026-27’ ಕ್ಕೆ ಆತಿಥ್ಯ ವಹಿಸಲು ಆಯ್ಕೆಯಾಗಿದೆ. ಈ ಪ್ರತಿಷ್ಠಿತ ಸ್ಥಾನಮಾನ ಪಡೆದಿರುವ ಭಾರತದ ಮೂರು ಸಂಸ್ಥೆಗಳಲ್ಲಿ ಮಾಹೆಯೂ ಒಂದಾಗಿದೆ.
ಭಾರತದಲ್ಲಿನ ಅಮೆರಿಕದ ರಾಯಭಾರಿ ಹಾಗೂ ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ರಾಯಭಾರಿ ಶ್ರೀ ಸರ್ಜಿಯೊ ಗೋರ್ ಅವರು ಭಾನುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಫೆಲೋಶಿಪ್‌ಗೆ ಚಾಲನೆ ನೀಡಿ, ಯುಎಸ್ ಇಂಡಿಯ ಟ್ರಸ್ಟ್ ಫೆಲೋಶಿಪ್‌ಗೆ ಆಯ್ಕೆಯಾದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ಹಾಗೂ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) – ಈ ಮೂರು ಪ್ರತಿಷ್ಠಿತ ಪ್ರತಿನಿಧಿಗಳಿಗೆ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು. ಅಮೆರಿಕದ ಸ್ವಾತಂತ್ರ್ಯೋತ್ಸವ 250ನೇ ದಿನಾಚರಣೆಯನ್ನು ಜಗತ್ತಿನ ವಿವಿಧೆಡೆಗಳಲ್ಲಿ ಆಚರಿಸುತ್ತಿದ್ದು ಈ ಕುರಿತ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಿತು.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಬ್ಲಿಕ್ -ಪ್ರೈವೇಟ್ ಪಾರ್ಟನರ್ಷಿಪ್) ರೂಪಿಸಲಾಗಿರುವ ಈ 12 ತಿಂಗಳ ಅವಧಿಯ ಯುಎಸ್-ಇಂಡಿಯಾ ಟ್ರಸ್ಟ್ ಫೆಲೋಶಿಪ್, ಜಗತ್ತಿನ ಶೈಕ್ಷಣಿಕ ಕ್ಷೇತ್ರದ ಮಹತ್ವದ ಯೋಜನೆಗಳಲ್ಲೊಂದಾಗಿದೆ. ಅಮೆರಿಕದ ಪೋಸ್ಟ್ ಡಾಕ್ಟೋರಲ್ ಮತ್ತು ವೃತ್ತಿಜೀವನದ ಆರಂಭಿಕ ಹಂತದಲ್ಲಿರುವ ಬೋಧಕರನ್ನು ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಅವಕಾಶ ಮಾಡಿಕೊಡುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ. ಅಮೆರಿಕ ಮತ್ತು ಭಾರತದ ಸಮಾನ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯಾಧುನಿಕವಾದ ಸಂಶೋಧನೆ-ಅಧ್ಯಯನಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶವನ್ನು ಈ ಫೆಲೋಶಿಪ್ ಹೊಂದಿದೆ. ಸಂಶೋಧನ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು, ಜೈವಿಕ ತಂತ್ರಜ್ಞಾನ, ಇಂಧನ, ರಕ್ಷಣಾ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳು ಪ್ರಮುಖವಾಗಿವೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು, ಅಮೆರಿಕದ ತಂತ್ರಜ್ಞಾನ ಕ್ಷೇತ್ರವು ಭಾರತದಲ್ಲಿ ವಿಸ್ತರಣೆಗೊಳ್ಳುತ್ತಲೇ ಇದೆ. ಯುಎಸ್ ಇಂಡಿಯ ಟ್ರಸ್ಟ್ ಫೆಲೋಶಿಪ್ ಈ ದ್ವಿಪಕ್ಷೀಯ ಸಂಬಂಧದ ಸದೃಢತೆಯನ್ನು ಎತ್ತಿ ತೋರಿಸುತ್ತದೆ.. ಮುಂದಿನ 250 ವರ್ಷಗಳ ದೂರದೃಷ್ಟಿತ್ವದಲ್ಲಿ ನಾವು ಕಾರ್ಯ ಎಸಗುತ್ತಿದ್ದೇವೆ. ಸಹಭಾಗಿತ್ವದ ಸಂಶೋಧನೆ, ನಾವೀನ್ಯ [ಇನ್ನೋವೇಶನ್] ವಿನಿಮಯ, ಮತ್ತು ದೀರ್ಘಕಾಲಿಕ ಶೈಕ್ಷಣಿಕ ಸಹಯೋಗಗಳು ಅಮೆರಿಕ-ಭಾರತ ಶೈಕ್ಷಣಿಕ ಸಂಬಂಧವನ್ನು ಇನ್ನಷ್ಟು ನಿಕಟಗೊಳಿಸಲಿವೆ” ಎಂದರು.
ಈ ಸಾಧನೆಯ ಕುರಿತು ಮಾತನಾಡಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ‘ಯುಎಸ್ ಇಂಡಿಯ ಟ್ರಸ್ಟ್ ಫೆಲೋಶಿಪ್ ಗೆ ಭಾರತದಲ್ಲಿ ಆಯ್ಕೆಯಾದ ಸಂಸ್ಥೆಗಳಲ್ಲಿ ಮಾಹೆ ಸೇರಿರುವುದು ಅಭಿಮಾನದ ಸಂಗತಿ. ಈ ಫೆಲೋಶಿಪ್‌ನಿಂದ ಎರಡೂ ದೇಶಗಳ ಸಂಶೋಧಕರ ಜ್ಞಾನವರ್ಧನೆಗೆ ಅಮೂಲ್ಯ ಅವಕಾಶ ಲಭ್ಯವಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಭಿವೃದ್ಧಿಗೊಳ್ಳುತ್ತಿರುವ [ಎಮರ್ಜಿಂಗ್] ಮತ್ತು ಕಾರ್ಯಕೌಶಲದ [ಸ್ಟ್ರಾಟೆಜಿಕ್] ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕದ ಸಂಶೋಧಕರು ಜ್ಞಾನವಿನಿಮಯ ಮಾಡಿಕೊಳ್ಳಲು ಈ ಫೆಲೋಶಿಪ್ ವೇದಿಕೆಯೊದಗಿಸಲಿದೆ. ಜ್ಞಾನ ಪ್ರಸರಣ ಮತ್ತು ದೀರ್ಘಕಾಲೀಕ ಸಾಂಸ್ಥಿಕ ಸಹಭಾಗಿತ್ವವನ್ನು ಉತ್ತೇಜಿಸುವ ಮೂಲಕ, ಈ ಫೆಲೋಶಿಪ್ ಎರಡೂ ದೇಶಗಳ ನಡುವಿನ ಅತ್ಯಾಧುನಿಕ ಸಂಶೋಧನೆ ಮತ್ತು ನಾವೀನ್ಯದ ಪ್ರಗತಿಗೆ ಮಹತ್ವದ ಕೊಡುಗೆ ನೀಡಲಿದೆ. ಅಮೆರಿಕ ಮತ್ತು ಭಾರತದ ನಡುವೆ ಶೈಕ್ಷಣಿಕ ಕೊಡುಕೊಳುಗೆಯನ್ನು ಉತ್ತೇಜಿಸುವ ಯುಎಸ್ ಇಂಡಿಯಾ ಟ್ರಸ್ಟ್ ಫೆಲೋಶಿಪ್‌ನಲ್ಲಿ ಸಕ್ರಿಯವಾಗಿ ಸಹಭಾಗಿಯಾಗಲು ಮಾಹೆ ಹೆಮ್ಮೆ ಪಡುತ್ತದೆ’’ ಎಂದರು.
ಯುಎಸ್ ಇಂಡಿಯಾ ಟ್ರಸ್ಟ್ ಫೆಲೋಶಿಪ್‌ನಲ್ಲಿ ಭಾಗವಹಿಸುವುದರ ಮೂಲಕ ಮಾಹೆಯ ಅಂತಾರಾಷ್ಟ್ರೀಯ ಸ್ಥಾನಮಾನ ಇನ್ನಷ್ಕು ವೃದ್ಧಿಸಲಿದೆ. ಅಮೆರಿಕದ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಪರಸ್ಪರ ವ್ಯವಹರಿಸುವ ಮೂಲಕ ಭಾರತದ ಸಂಶೋಧಕರ ಶೈಕ್ಷಣಿಕ, ಸಂಶೋಧನಾತ್ಮಕ ಮತ್ತು ಸಾಂಸ್ಥಿಕ ಬಾಂಧವ್ಯಗಳಿಗೆ ಸ್ಪಷ್ಟ ಚೌಕಟ್ಟು ಒದಗಿಬರಲಿದೆ.
ಈ ಕಾರ್ಯಕ್ರಮದಲ್ಲಿ ಚೆನ್ನೈನ ಅಮೆರಿಕದ ಕಾನ್ಸುಲೇಟ್ ಜನರಲ್ ಮರಿಯಾನಾ ಎಲ್. ನಿಸುಲಾರ್, ಪ್ರತೀಕ್ಷಾ ಟ್ರಸ್ಟ್‌ನ ಕ್ರಿಸ್ ಗೋಪಾಲಕೃಷ್ಣನ್ , ಮಜುಂಮ್‌ದಾರ್ ಶಾ ಫಿಲಾಂಥ್ರಪಿ ಸಂಸ್ಥೆಯ ಕಿರಣ್ ಮಜುಂದಾರ್-ಶಾ, MAHEಯ ಉಪಕುಲಪತಿ ಡಾ. ಶರತ್ ಕೆ. ರಾವ್, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್ ಹಾಗೂ ಐಐಟಿ ಮದರಾಸಿನ ಜಾಗತಿಕ ವ್ಯವಹಾರಗಳ ವಿಭಾಗದ ಡೀನ್ ಪ್ರೀತಿ ಅಘಲಾಯಯಂ ಅವರು ಉಪಸ್ಥಿತರಿದ್ದರು.






