ಬೆಂಗಳೂರು: ಭಾರತದಲ್ಲಿ ವೈಯಕ್ತಿಕ ಸಾಲ ವಿತರಣಾ ಕ್ಷೇತ್ರವು ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಈ ಹಿಂದೆ ಕೇವಲ ತುರ್ತು ಸಂದರ್ಭಗಳು ಅಥವಾ ಗಂಭೀರ ಆರ್ಥಿಕ ಸಂಕಷ್ಟದ ವೇಳೆ ಅನಿವಾರ್ಯವಾಗಿ ಪಡೆಯಲಾಗುತ್ತಿದ್ದ ವೈಯಕ್ತಿಕ ಸಾಲಗಳು, ಇಂದು ಜೀವನಶೈಲಿಯ ಆಕಾಂಕ್ಷೆಗಳು ಹಾಗೂ ದೈನಂದಿನ ಪ್ರಾಯೋಗಿಕ ಅಗತ್ಯಗಳನ್ನು ಪೂರೈಸುವ ಪಕ್ಕಾ ಯೋಜಿತ ಆರ್ಥಿಕ ಸಾಧನಗಳಾಗಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಈ ಮಹತ್ವದ ಬದಲಾವಣೆಯು ಮುಖ್ಯವಾಗಿ ಯುವ ಗ್ರಾಹಕರು ಹಾಗೂ ಆರ್ಥಿಕವಾಗಿ ಸದೃಢರಾಗಿರುವ ವರ್ಗದಲ್ಲಿ ಎದ್ದು ಕಾಣುತ್ತಿದ್ದು, ಅವರು ತಮ್ಮ ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆಗಳಿಗೆ ಧಕ್ಕೆ ತರದಂತೆ ಸಾಲವನ್ನು ಕಾರ್ಯತಂತ್ರದ ರೀತಿಯಲ್ಲಿ ಬಳಸಿಕೊಳ್ಳಲು ಹೆಚ್ಚು ಮುಕ್ತ ಮನಸ್ಸು ಮಾಡುತ್ತಿದ್ದಾರೆ.
ಈ ಮಹತ್ತರ ಬೆಳವಣಿಗೆಯ ಕುರಿತು ಕೊಟಕ್ ಮಹೀಂದ್ರಾ ಬ್ಯಾಂಕ್ ನ ಪರ್ಸನಲ್ ಲೋನ್ಸ್ ವಿಭಾಗದ ಮುಖ್ಯಸ್ಥ ಅಮಿತ್ ಪಾಠಕ್ ಅವರು ಮಾತನಾಡಿ , “ಈ ಪರಿವರ್ತನೆಯು ಪ್ರಮುಖವಾಗಿ ಎರಡು ಟ್ರೆಂಡ್ ಗಳಿಂದ ಉಂಟಾಗಿದೆ. ಅದೇನೆಂದರೆ, ಮೊದಲನೆಯದು ಸಾಲಗಾರರ ವರ್ತನೆಯಲ್ಲಿನ ಬದಲಾವಣೆ, ಎರಡನೆಯದು ಎಐ ಆಧಾರಿತ ಸಾಲ ಅರ್ಹತೆ ನಿರ್ಧಾರದ (ಅಂಡರ್‌ರೈಟಿಂಗ್) ಹೆಚ್ಚುತ್ತಿರುವ ಬಳಕೆ. ಗ್ರಾಹಕರು ಸಾಲದ ಮೊತ್ತವು ತಮಗೆ ಅತ್ಯಂತ ವೇಗವಾಗಿ, ಯಾವುದೇ ಅಡೆತಡೆಗಳಿಲ್ಲದೆ ಹಾಗೂ ಸುಲಭವಾಗಿ ಸಿಗಬೇಕೆಂದು ನಿರೀಕ್ಷಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬ್ಯಾಂಕುಗಳು ಕೂಡ ಹೆಚ್ಚು ಚುರುಕಾದ ಅಪಾಯ ನಿರ್ಣಯ ಮತ್ತು ವಂಚನೆ ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿವೆ” ಎಂದು ವಿಶ್ಲೇಷಿಸಿದ್ದಾರೆ.
ಅನುಭವ ಆಧಾರಿತ ಜೀವನಶೈಲಿಯ ವೆಚ್ಚಗಳಿಗಾಗಿ ಸಾಲ ಪಡೆಯುವ ಮನೋಭಾವ ಬೆಳೆಯುತ್ತಿರುವುದು ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಯುವ ಗ್ರಾಹಕರು, ಪ್ರಮುಖವಾಗಿ ಜೆನ್-ಜೀ ಹಾಗೂ ಹೊಸದಾಗಿ ಉದ್ಯೋಗಕ್ಕೆ ಸೇರಿ ಸಂಪಾದನೆ ಆರಂಭಿಸಿರುವ ಯುವಕರು ಪ್ರವಾಸ, ವಿವಾಹ, ಜೀವನಶೈಲಿಯ ಅಗತ್ಯ ವಸ್ತುಗಳ ಖರೀದಿ ಮತ್ತು ಜೀವನದ ಮಹತ್ವದ ಮೈಲಿಗಲ್ಲುಗಳ ಅನುಭವ ಪಡೆಯುವಂತಹ ಐಚ್ಛಿಕ ಖರ್ಚುಗಳಿಗಾಗಿ ಸಾಲ ಪಡೆಯಲು ಸಿದ್ಧರಾಗುತ್ತಿದ್ದಾರೆ. ಸಾಲವನ್ನು ಕೇವಲ ಭಯ-ಎಚ್ಚರಿಕೆಯ ದೃಷ್ಟಿಯಿಂದಲೇ ನೋಡುತ್ತಿದ್ದ ಹಿಂದಿನ ತಲೆಮಾರುಗಳಿಗಿಂತ ಭಿನ್ನವಾಗಿ, ಇಂದಿನ ಯುವಕರು ಸಾಲವನ್ನು ತಮ್ಮ ಇಂದಿನ ಆಕಾಂಕ್ಷೆಗಳನ್ನು ಭವಿಷ್ಯದ ಗಳಿಕೆಯ ಸಾಮರ್ಥ್ಯದೊಂದಿಗೆ ಸರಿದೂಗಿಸುವ ಒಂದು ಸಬಲೀಕರಣದ ಸಾಧನವೆಂದು ಪರಿಗಣಿಸುತ್ತಿದ್ದಾರೆ. ಇದೇ ವೇಳೆ, ಯೋಜಿತ ಸಾಲ ಪಡೆಯುವಿಕೆಯ ಹೆಚ್ಚಳದೊಂದಿಗೆ ಜವಾಬ್ದಾರಿಯುತ ಮರುಪಾವತಿಯ ಸಂಸ್ಕೃತಿಯೂ ಗಟ್ಟಿಯಾಗುತ್ತಿದೆ. ಗ್ರಾಹಕರು ಮರುಪಾವತಿಯಲ್ಲಿ ಶಿಸ್ತು ಕಾಪಾಡುವುದು, ಉತ್ತಮ ಕ್ರೆಡಿಟ್ ಸ್ಕೋರ್ ಗಳನ್ನು ಕಾಯ್ದುಕೊಳ್ಳುವುದು ಹಾಗೂ ತಮ್ಮ ಆದಾಯದ ಮಿತಿಯೊಳಗಷ್ಟೇ ಸಾಲ ಪಡೆಯುವುದಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.
ಇಲ್ಲಿ ಎಲ್ಲರ ಗಮನ ಸೆಳೆಯುವ ಪ್ರಮುಖ ಅಂಶವೆಂದರೆ, ಸಾಲ ಪಡೆಯುವ ಆಸಕ್ತಿ ಹೆಚ್ಚುತ್ತಿದ್ದರೂ ಅದು ಮರುಪಾವತಿಯ ನಡವಳಿಕೆಯನ್ನು ಎಳ್ಳಷ್ಟೂ ದುರ್ಬಲಗೊಳಿಸಿಲ್ಲ. ಹೆಚ್ಚುತ್ತಿರುವ ಆರ್ಥಿಕ ಸಾಕ್ಷರತೆ, ಸಿಬಿಲ್/ ಕ್ರೆಡಿಟ್ ಸ್ಕೋರ್‌ಗಳ ಬಗೆಗಿನ ಜಾಗೃತಿ ಹಾಗೂ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಶಿಸ್ತಿನ ಮಹತ್ವ ತಿಳಿದಿರುವುದು ಸಾಲ ಪಡೆಯುವಿಕೆಯನ್ನು ಹೆಚ್ಚು ಜವಾಬ್ದಾರಿಯುತವಾಗಿಸಿದೆ. ಇಂದಿನ ಸಾಲಗಾರರು ಆರೋಗ್ಯಕರ ಕ್ರೆಡಿಟ್ ಇತಿಹಾಸವನ್ನು ಕಾಪಾಡಿಕೊಳ್ಳುವಲ್ಲಿ ಹಾಗೂ ಸಾಲದ ಮೇಲೆ ಸಾಲವನ್ನು ಅತಿಯಾಗಿ ಹೇರಿಕೊಳ್ಳುವ ಅಪಾಯಕಾರಿ ಪದ್ಧತಿಗಳಿಂದ ದೂರವಿರಲು ಹೆಚ್ಚು ಜಾಗರೂಕರಾಗಿದ್ದಾರೆ.
ಮತ್ತೊಂದೆಡೆ, ಬ್ಯಾಂಕುಗಳು ಕೂಡ ಎಐ ಮತ್ತು ಮೆಷಿನ್ ಲರ್ನಿಂಗ್ ಆಧಾರಿತ ತಂತ್ರಜ್ಞಾನಗಳ ಮೂಲಕ ಸಾಲದ ಅರ್ಹತೆಯನ್ನು ಪರಿಶೀಲಿಸುವ ಹಾಗೂ ಸಾಲ ವಿತರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ಬದಲಾಯಿಸುತ್ತಿವೆ. ಸಾಲ ನೀಡಿಕೆಯ ಹಂತಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳುತ್ತಿರುವುದರಿಂದ, ತ್ವರಿತ, ನಿಖರ ಮತ್ತು ಅತ್ಯಂತ ಸುರಕ್ಷಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಐ ಪ್ರಮುಖ ಪಾತ್ರ ವಹಿಸುತ್ತಿದೆ. ಈ ತಾಂತ್ರಿಕ ಮಾದರಿಗಳನ್ನು ನಿಯಂತ್ರಕ ಚೌಕಟ್ಟುಗಳ ವ್ಯಾಪ್ತಿಯಲ್ಲೇ ರೂಪಿಸಿ ಅಳವಡಿಸಲಾಗುತ್ತಿದ್ದು, ನಿರ್ಧಾರ ಕೈಗೊಳ್ಳುವಲ್ಲಿ ಮಾನವ ಮೇಲ್ವಿಚಾರಣೆಯೂ ಮಹತ್ವದ ಪಾತ್ರವನ್ನು ಮುಂದುವರಿಸಿದೆ. ಬ್ಯಾಂಕುಗಳು ಕೇವಲ ಎಐ ನೀಡುವ ತೀರ್ಮಾನಗಳ ಮೇಲಷ್ಟೇ ಕುರುಡಾಗಿ ಅವಲಂಬಿತವಾಗಿಲ್ಲ. ಇಂತಹ ಮಾದರಿಗಳನ್ನು ಮೊದಲು ಸಣ್ಣ ಗ್ರಾಹಕ ಗುಂಪುಗಳ ಮೇಲೆ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ, ನಂತರ ಅವುಗಳ ಫಲಿತಾಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ದೋಷಗಳನ್ನು ಸರಿಪಡಿಸಿದ ಬಳಿಕವಷ್ಟೇ ವ್ಯಾಪಕವಾಗಿ ಜಾರಿಗೆ ತರಲಾಗುತ್ತದೆ. ಇದು ಸಾಲ ನೀಡಿಕೆಯ ನಿಖರತೆಯನ್ನು ಹೆಚ್ಚಿಸುವುದರ ಜೊತೆಗೆ ವಂಚನೆಗಳನ್ನು ತಡೆಯಲು ಮತ್ತು ಸೈಬರ್ ದಾಳಿಗಳು ಅಥವಾ ದಾಖಲೆಗಳ ದುರುಪಯೋಗಕ್ಕೆ ಸಂಬಂಧಿಸಿದ ಅಪಾಯಗಳನ್ನು ಗಣನೀಯವಾಗಿ ತಗ್ಗಿಸಲು ನೆರವಾಗುತ್ತಿದೆ.
ಕಡಿಮೆ ಅವಧಿಯಲ್ಲಿ ಗ್ರಾಹಕರ ಬೃಹತ್ ಪ್ರಮಾಣದ ಆರ್ಥಿಕ ದತ್ತಾಂಶವನ್ನು ಆಳವಾಗಿ ವಿಶ್ಲೇಷಿಸಲು ಸಾಲದಾತ ಸಂಸ್ಥೆಗಳಿಗೆ ಎಐ ನೆರವಾಗುತ್ತಿದ್ದು, ಸಾಲ ಅರ್ಹತೆಯ ನಿರ್ಣಯ ಪ್ರಕ್ರಿಯೆಗೆ ಇದು ಬಲ ತುಂಬಿದೆ. ಇದರಿಂದಾಗಿ ಅತ್ಯಂತ ಸೂಕ್ಷ್ಮ ಮಟ್ಟದ ಅಪಾಯದ ಮೌಲ್ಯಮಾಪನ, ಸಾಲ ಮರುಪಾವತಿ ತಪ್ಪಿಸುವ ಸಾಧ್ಯತೆಗಳ ನಿಖರ ಮುನ್ಸೂಚನೆ ಹಾಗೂ ಸೂಕ್ತ ಬಡ್ಡಿದರ ನಿಗದಿಯ ತೀರ್ಮಾನಗಳು ಸಾಧ್ಯವಾಗುತ್ತಿವೆ. ಇಂತಹ ಸುಧಾರಿತ ವ್ಯವಸ್ಥೆಯು ಬ್ಯಾಂಕುಗಳಲ್ಲಿ ವಸೂಲಾಗದ ಸಾಲಗಳನ್ನು (ಎನ್ ಪಿ ಎ) ತಗ್ಗಿಸುವ ಮೂಲಕ ಹಾಗೂ ಸಾಲ ಸೌಲಭ್ಯವನ್ನು ಗ್ರಾಹಕರಿಗೆ ಅತ್ಯಂತ ದಕ್ಷತೆಯಿಂದ ತಲುಪಿಸುವ ಮೂಲಕ ಬ್ಯಾಂಕುಗಳು ಮತ್ತು ಸಾಲಗಾರರಿಬ್ಬರಿಗೂ ಉಭಯ ಲಾಭವನ್ನು ತಂದುಕೊಡುತ್ತಿದೆ.
ಇದಲ್ಲದೆ, ಆರ್ಥಿಕವಾಗಿ ಸಬಲರಾಗಿರುವ ಹಾಗೂ ಶ್ರೀಮಂತ ಗ್ರಾಹಕರು ತಮ್ಮ ದೈನಂದಿನ ನಗದು ನಿರ್ವಹಣಾ ಸಾಧನವಾಗಿ ವೈಯಕ್ತಿಕ ಕ್ರೆಡಿಟ್ ಲೈನ್ ಗಳನ್ನು ಬಳಸಿಕೊಳ್ಳುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ಮತ್ತೊಂದು ಹೊಸ ಪ್ರವೃತ್ತಿಯಾಗಿದೆ. ಅಲ್ಪಾವಧಿಯ ನಗದು ಅಗತ್ಯಗಳು ಎದುರಾದಾಗ ತಮ್ಮ ಷೇರು ಅಥವಾ ಮ್ಯೂಚುವಲ್ ಫಂಡ್ ಗಳಂತಹ ಹೂಡಿಕೆಗಳನ್ನು ತರಾತುರಿಯಲ್ಲಿ ಮಾರಾಟ ಮಾಡುವ ಬದಲು, ಹಲವರು ಇಂತಹ ಹೊಂದಾಣಿಕೆಯುಳ್ಳ ಕ್ರೆಡಿಟ್ ಸೌಲಭ್ಯಗಳನ್ನು ಬಳಸುತ್ತಿದ್ದಾರೆ. ಇದರಿಂದ ಅವರ ಹೂಡಿಕೆಗಳ ಚಕ್ರಬಡ್ಡಿ ಬೆಳವಣಿಗೆಯ ಲಾಭವೂ ಕೈತಪ್ಪುವುದಿಲ್ಲ, ಜೊತೆಗೆ ತಕ್ಷಣದ ನಗದು ಅಗತ್ಯವೂ ಪೂರೈಸಲ್ಪಡುತ್ತದೆ. ಇದು ಜನರ ಆಲೋಚನಾ ವಿಧಾನದಲ್ಲಿ ಉಂಟಾಗಿರುವ ಸಮಗ್ರ ಬದಲಾವಣೆಗೆ ಸಾಕ್ಷಿಯಾಗಿದ್ದು, ಸಾಲವನ್ನು ಆರ್ಥಿಕ ಸಂಕಷ್ಟದ ಸಂಕೇತವೆಂದು ನೋಡುವ ಕಾಲ ಕಳೆದು, ಜಾಣ್ಮೆಯ ಆರ್ಥಿಕ ಯೋಜನೆಯ ಪ್ರಬಲ ಅಸ್ತ್ರವಾಗಿ ಸ್ವೀಕರಿಸಲಾಗುತ್ತಿದೆ.







