ಮಂಗಳೂರು/ಮಂತ್ರಾಲಯ, ಜು. 21: ತಿರುಪತಿಯಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಆಂಧ್ರಪ್ರದೇಶದ ಕುರ್ನೂಲು ಸಮೀಪ ರಾಷ್ಟ್ರೀಯ ಹೆದ್ದಾರಿ–40ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕೇಂದ್ರೀಯ ಸಮಿತಿ ಜಂಟಿ ಕಾರ್ಯದರ್ಶಿ ಹಾಗೂ ಕರಂಗಲ್ಪಾಡಿ ಹಾಪ್‌ಕಾಮ್ಸ್‌ನ ಪ್ರಧಾನ ವ್ಯವಸ್ಥಾಪಕರಾದ ರವಿಚಂದ್ರ ಶೆಟ್ಟಿ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಲೆಕ್ಕ ಪರಿಶೋಧಕ ಸುದೇಶ್ ರೈ ಹಾಗೂ ಪ್ರದೀಪ್ ಆಳ್ವ ಕದ್ರಿ ಗಾಯಗೊಂಡಿದ್ದು, ಅವರನ್ನು ಎಮ್ಮಿಗನ್ನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪುರುಷೋತ್ತಮ ಭಂಡಾರಿ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ ಸೇರಿದಂತೆ ಪದಾಧಿಕಾರಿಗಳು ಎರಡು ಕಾರುಗಳಲ್ಲಿ ತಿರುಪತಿಯಿಂದ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಸತೀಶ್ ಶೆಟ್ಟಿ ಪಟ್ಲ ಪ್ರಯಾಣಿಸುತ್ತಿದ್ದ ಕಾರು ಮುಂಚಿತವಾಗಿ ಮಂತ್ರಾಲಯ ತಲುಪಿದ್ದು, ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಕುರ್ನೂಲು ಸಮೀಪ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ಬಳಿಕ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಕಾರಿನೊಳಗೆ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ರವಿಚಂದ್ರ ಶೆಟ್ಟಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಮಂಗಳೂರಿಗೆ ತರಲಾಗಲಿದ್ದು, ಗಾಯಾಳುಗಳನ್ನು ಕೂಡ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸ್ಥಳಾಂತರಿಸುವ ಸಿದ್ಧತೆ ನಡೆಯುತ್ತಿದೆ.
ಈ ದುರ್ಘಟನೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಸದಸ್ಯರು ಹಾಗೂ ಅಭಿಮಾನಿಗಳಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.







