ಮಣಿಪಾಲ್, ಜುಲೈ 08, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯ ಎಂದು ಪರಿಗಣಿಸಲಾದ ಉತ್ಕೃಷ್ಟ ಸಂಸ್ಥೆಯು ಫಾರ್ಮಾಕೋಮೆಟ್ರಿಕ್ಸ್ ವಲಯದಲ್ಲಿ ಭಾರತದ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ‘ನೊವೊ ನಾರ್ಡಿಸ್ಕ್ ಗ್ಲೋಬಲ್ ಬಿಸಿನೆಸ್ ಸರ್ವೀಸಸ್’ (ಜಿಬಿಎಸ್) ಜತೆಗಿನ ದೀರ್ಘಕಾಲದ ಸಹಯೋಗವನ್ನು ಮತ್ತಷ್ಟು ವಿಸ್ತರಿಸಿದೆ.
ಈ ಒಪ್ಪಂದದ ಅನ್ವಯ, ‘ಕ್ವಾಂಟಿಟೇಟಿವ್ ಡ್ರಗ್ ಡೆವಲಪ್‌ಮೆಂಟ್’ [ಪ್ರಮಾಣಾತ್ಮಕ ಔಷಧಿ ಅಭಿವೃದ್ದಿ] ಕ್ಷೇತ್ರದಲ್ಲಿ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ‘ನೊವೊ ನಾರ್ಡಿಸ್ಕ್ ಜಿಬಿಎಸ್’ ಸಂಸ್ಥೆಯು ಮುಂದಿನ ಐದು ವರ್ಷಗಳ ಅವಧಿಗೆ ರೂ. 1.75 ಕೋಟಿ ಆರ್ಥಿಕ ನೆರವು ಒದಗಿಸಲಿದೆ.
ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್’ನಲ್ಲಿ (ಎಂಸಿಒಪಿಎಸ್) ಸುಸಜ್ಜಿತ ‘ಫಾರ್ಮಾಕೋಮೆಟ್ರಿಕ್ಸ್ ಕಂಪ್ಯೂಟಿಂಗ್ ಸೌಲಭ್ಯ’ ಸ್ಥಾಪಿಸುವುದು ಈ ಒಪ್ಪಂದದ ಪ್ರಮುಖ ಭಾಗವಾಗಿದೆ. ಇದು ಸಂಶೋಧಕರಿಗೆ ಅತ್ಯಾಧುನಿಕ ತಂತ್ರಜ್ಞಾನದ ನೆರವು ಒದಗಿಸುವುದರ ಜತೆಗೆ, ಔಷಧ ಅಭಿವೃದ್ಧಿ ವಲಯದಲ್ಲಿ ಸಂಶೋಧನೆ, ಶೈಕ್ಷಣಿಕ ತರಬೇತಿ ಮತ್ತು ಜಾಗತಿಕ ವೈಜ್ಞಾನಿಕ ಸಹಯೋಗಕ್ಕೆ ಹೆಚ್ಚಿನ ಬಲ ತುಂಬಲಿದೆ.
ಪ್ರಸ್ತುತ ದಿನಗಳಲ್ಲಿ ಔಷಧ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯು ಸಂಪೂರ್ಣವಾಗಿ ದತ್ತಾಂಶ ಆಧಾರಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕ್ಲಿನಿಕಲ್ ಪ್ರಯೋಗಗಳ ವಿನ್ಯಾಸವನ್ನು ಅತ್ಯುತ್ತಮವಾಗಿಸಲು, ರೋಗಿಗಳಲ್ಲಿ ಚಿಕಿತ್ಸೆಯ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಹಾಗೂ ಔಷಧ ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ‘ಫಾರ್ಮಾಕೋಮೆಟ್ರಿಕ್ಸ್’ ಒಂದು ಅತ್ಯಂತ ನಿರ್ಣಾಯಕ ವಿಭಾಗವಾಗಿದೆ.
ಫಾರ್ಮಾಕೋಮೆಟ್ರಿಕ್ಸ್ ಕ್ಷೇತ್ರದಲ್ಲಿ ನುರಿತ ಪರಿಣಿತರನ್ನು ರೂಪಿಸುವ ನಿಟ್ಟಿನಲ್ಲಿ, ಈ ಯೋಜನೆಯಡಿ ಪ್ರತಿ ವರ್ಷ ಒಬ್ಬ ಪಿಎಚ್.ಡಿ ಹಾಗೂ ಒಬ್ಬ ಪೋಸ್ಟ್-ಡಾಕ್ಟರಲ್ ಸಂಶೋಧಕರಿಗೆ ನೆರವು ನೀಡಲಾಗುತ್ತದೆ. ಅಲ್ಲದೆ, ಔಷಧ ಅಭಿವೃದ್ಧಿಯ ನಾವೀನ್ಯ ಕುರಿತಂತೆ ಎಂಸಿಒಪಿಎಸ್ ಹೊಸದಾಗಿ 4-6 ವಿಶೇಷ ಪಠ್ಯಕ್ರಮಗಳನ್ನು ಪರಿಚಯಿಸಲಿದೆ. ಇದರಲ್ಲಿ ‘ಮಾಡೆಲ್-ಇನ್‌ಫಾರ್ಮ್ಡ್ ಡ್ರಗ್ ಡೆವಲಪ್‌ಮೆಂಟ್’ (ಎಂಐಡಿಡಿ), ಸಿಸ್ಟಮ್ಸ್ ಮಾಡೆಲಿಂಗ್ ಹಾಗೂ ಜೀನ್ ಥೆರಪಿಯಂತಹ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳ ಕುರಿತಾದ ಸಮಗ್ರ ಅಧ್ಯಯನ ಒಳಗೊಂಡಿರಲಿದೆ.
ಈ ಮಹತ್ವದ ಒಪ್ಪಂದದಿಂದಾಗಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಔಷಧ ಅಭಿವೃದ್ಧಿ ಕ್ಷೇತ್ರದ ನೈಜ ಸವಾಲುಗಳ ಮೇಲೆ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಅಲ್ಲದೆ, ಜಾಗತಿಕ ಫಾರ್ಮಾಸ್ಯುಟಿಕಲ್ ನಾವೀನ್ಯ ವಲಯದಲ್ಲಿ ಭಾರತದ ಹೆಜ್ಜೆಗುರುತನ್ನು ಇದು ಮತ್ತಷ್ಟು ಸದೃಢಗೊಳಿಸಲಿದೆ.
ನೊವೊ ನಾರ್ಡಿಸ್ಕ್ ಜಿಬಿಎಸ್‌ನ ಉಪಾಧ್ಯಕ್ಷ ಹಾಗೂ ಎಂಡಿ ಜಾನ್ ಡಾಬರ್ ಮಾತನಾಡಿ, “ನೊವೊ ನಾರ್ಡಿಸ್ಕ್‌ನ ಜಾಗತಿಕ ಬೆಳವಣಿಗೆಯಲ್ಲಿ ಭಾರತ ಮತ್ತು ಬೆಂಗಳೂರಿನ ಜಿಬಿಎಸ್ ಮಹತ್ತರ ಪಾತ್ರ ವಹಿಸುತ್ತಿವೆ. ಮಾಹೆಯೊಂದಿಗಿನ ಈ ಒಪ್ಪಂದವು ಫಾರ್ಮಾಕೋಮೆಟ್ರಿಕ್ಸ್ ಕ್ಷೇತ್ರದಲ್ಲಿ ಪರಿಣಿತ ತಜ್ಞರನ್ನು ರೂಪಿಸುವ ಜತೆಗೆ, ನಮ್ಮ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಶಕ್ತಿ ತುಂಬಲಿದೆ. ಅಸಾಧಾರಣ ಪ್ರತಿಭೆ ಹಾಗೂ ಬಲವಾದ ಶೈಕ್ಷಣಿಕ ಸಹಭಾಗಿತ್ವವನ್ನು ಬೆಸೆಯುವ ಈ ಹೆಜ್ಜೆಯು, ಜಾಗತಿಕ ಮಟ್ಟದಲ್ಲಿ ನಮ್ಮ ಸಂಸ್ಥೆಗೆ ಹಾಗೂ ಅಂತಿಮವಾಗಿ ರೋಗಿಗಳಿಗೆ ಅತ್ಯುತ್ತಮ ಕೊಡುಗೆ ನೀಡಲಿದೆ,” ಎಂದು ಸಂತಸ ವ್ಯಕ್ತಪಡಿಸಿದರು.
ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, “ಔಷಧೀಯ ವಿಜ್ಞಾನದ ಸಂಶೋಧನೆ ಮತ್ತು ತರಬೇತಿ ವಲಯದಲ್ಲಿ ಈ ಸಹಯೋಗ ಪ್ರಮುಖ ಮೈಲಿಗಲ್ಲು. ಶೈಕ್ಷಣಿಕ ಶ್ರೇಷ್ಠತೆ ಮತ್ತು ಉದ್ಯಮದ ಅನುಭವವನ್ನು ಒಗ್ಗೂಡಿಸುವ ಈ ಹೆಜ್ಜೆಯಿಂದಾಗಿ, ಫಾರ್ಮಾಕೋಮೆಟ್ರಿಕ್ಸ್‌ನಲ್ಲಿ ಭಾರತದ ಸಾಮರ್ಥ್ಯ ಇಮ್ಮಡಿಯಾಗಲಿದೆ. ಅಲ್ಲದೆ, ಅತ್ಯಾಧುನಿಕ ಸಂಶೋಧನೆಗಳಿಗೆ ಉತ್ತೇಜನ ದೊರೆಯುವುದರೊಂದಿಗೆ ಜಾಗತಿಕ ಔಷಧ ಅಭಿವೃದ್ಧಿಗೆ ಬೆಂಬಲ ನೀಡಬಲ್ಲ ಭವಿಷ್ಯದ ವಿಜ್ಞಾನಿಗಳನ್ನು ಇದು ಸೃಷ್ಟಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೊವೊ ನಾರ್ಡಿಸ್ಕ್ ಗ್ಲೋಬಲ್ ಆರ್&ಡಿ ವಿಭಾಗದ ಹಿರಿಯ ನಿರ್ದೇಶಕ ಹೆನ್ರಿಕ್ ಅಗರ್ಸ್ ಮಾತನಾಡಿ, “ಮಾಹೆ ಜತೆಗಿನ ಈ ಶೈಕ್ಷಣಿಕ ಒಪ್ಪಂದವು ಸಾಕ್ಷ್ಯಾಧಾರಿತ ಔಷಧ ಅಭಿವೃದ್ಧಿ ಮತ್ತು ಕ್ವಾಂಟಿಟೇಟಿವ್ ಸೈನ್ಸ್ ವಿಭಾಗವನ್ನು ಮುನ್ನಡೆಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಬೊಜ್ಜು ನಿಯಂತ್ರಣದ ಸಂಶೋಧನೆಗಳು ಕೇವಲ ತೂಕ ಇಳಿಕೆಯಾಚೆಗೂ ವಿಸ್ತರಿಸುತ್ತಿರುವ ಕಾಲದಲ್ಲಿ, ಚಿಕಿತ್ಸೆಯಿಂದ ದೇಹದ ಸಂಯೋಜನೆಯಲ್ಲಿ ಆಗುವ ಬದಲಾವಣೆಗಳನ್ನು ಅರಿಯುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ಸೂಕ್ತ ಸಾಕ್ಷ್ಯಗಳ ಆಧಾರದ ಮೇಲೆ ನೂತನ ‘ಮಾಡೆಲಿಂಗ್ ಫ್ರೇಮ್‌ವರ್ಕ್’ ರೂಪಿಸುವುದು ನಮ್ಮ ಗುರಿಯಾಗಿದೆ. ಇದು ಮಾಡೆಲ್-ಆಧಾರಿತ ಸಂಶೋಧನೆಯನ್ನು ಬಲಪಡಿಸುವ ಜತೆಗೆ ಅತ್ಯುತ್ತಮ ವೈಜ್ಞಾನಿಕ ಒಳನೋಟಗಳನ್ನು ನೀಡಲಿದೆ,” ಎಂದು ತಿಳಿಸಿದರು.
ಎಂಸಿಒಪಿಎಸ್ ಪ್ರಿನ್ಸಿಪಾಲ್ ಡಾ. ಶ್ರೀನಿವಾಸ್ ಮುತಾಲಿಕ್ ಮತ್ತು ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಮುಖ್ಯಸ್ಥ ಡಾ. ಸುರುಳಿವೇಲ್ ರಾಜನ್ ಜಂಟಿಯಾಗಿ ಮಾತನಾಡಿ, “ಈ ಒಪ್ಪಂದವು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಅತ್ಯಾಧುನಿಕ ತರಬೇತಿ ಹಾಗೂ ತಂತ್ರಜ್ಞಾನದ ನೆರವು ನೀಡಲಿದೆ. ಆಧುನಿಕ ಔಷಧ ಅಭಿವೃದ್ಧಿಯ ಸವಾಲುಗಳನ್ನು ಎದುರಿಸಬಲ್ಲ ನುರಿತ ವೃತ್ತಿಪರರನ್ನು ರೂಪಿಸುವ ಜತೆಗೆ, ನಮ್ಮ ಕ್ಯಾಂಪಸ್‌ನ ಸಂಶೋಧನಾ ಪರಿಸರವನ್ನು ಇದು ಇನ್ನಷ್ಟು ಸದೃಢಗೊಳಿಸಲಿದೆ,” ಎಂದರು.
ಔಷಧೀಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಎಂಸಿಒಪಿಎಸ್ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಆರು ದಶಕಗಳಿಗೂ ಮೀರಿದ ಶ್ರೇಷ್ಠ ಶೈಕ್ಷಣಿಕ ಇತಿಹಾಸ ಹೊಂದಿರುವ ಈ ಸಂಸ್ಥೆಯು, ನ್ಯಾನೊಥೆರಪ್ಯೂಟಿಕ್ಸ್, ಔಷಧ ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ವಿನೂತನ ಸಂಶೋಧನೆಗಳನ್ನು ಎಂಸಿಒಪಿಎಸ್ ಪ್ರಿನ್ಸಿಪಾಲ್ ಹಾಗೂ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಮುತಾಲಿಕ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಉನ್ನತ ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಸಂಶೋಧನೆ ಹಾಗೂ ಪ್ರತಿಭೆಗಳನ್ನು ಉತ್ತೇಜಿಸುವ ‘ನೊವೊಸ್ಪಾರ್ಕ್’ ಯೋಜನೆಯಡಿ ಈ ಕಾರ್ಯಕ್ರಮ ಜಾರಿಯಾಗುತ್ತಿದೆ. ಈ ವಿಸ್ತರಿತ ಒಪ್ಪಂದದ ಮೂಲಕ, ಫಾರ್ಮಾಕೋಮೆಟ್ರಿಕ್ಸ್ ಸಂಶೋಧನೆಗೆ ಪೂರಕವಾದ ವಾತಾವರಣ ನಿರ್ಮಿಸಲು, ಔಷಧ ಅಭಿವೃದ್ಧಿಯ ನಾವೀನ್ಯಕ್ಕೆ ವೇಗ ನೀಡಲು ಮತ್ತು ಜಾಗತಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಮಾಹೆ ಮತ್ತು ನೊವೊ ನಾರ್ಡಿಸ್ಕ್ ಜಿಬಿಎಸ್ ಜಂಟಿಯಾಗಿ ಹೆಜ್ಜೆ ಇಟ್ಟಿವೆ.
ಫಾರ್ಮಾಕೊಮೆಟ್ರಿಕ್ಸ್ ಎಂಬುದು ಔಷಧಗಳ ಅಭಿವೃದ್ಧಿ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ನಿರ್ಧಾರಗಳನ್ನು ಹೆಚ್ಚು ನಿಖರ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಲು ದತ್ತಾಂಶ ವಿಶ್ಲೇಷಣೆ, ಮಾದರೀಕರಣ (ಮಾಡೆಲಿಂಗ್) ಮತ್ತು ತದ್ರೂಪಸೃಷ್ಟಿ (ಸಿಮ್ಯುಲೇಶನ್) ತಂತ್ರಜ್ಞಾನಗಳನ್ನು ಬಳಸುವ ವಿಶೇಷ ವೈಜ್ಞಾನಿಕ ಅಧ್ಯಯನ ಕ್ಷೇತ್ರವಾಗಿದೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು:
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಾಗಿದೆ. ಆರೋಗ್ಯ ವಿಜ್ಞಾನ, ನಿರ್ವಹಣೆ, ಕಾನೂನು, ಮಾನವಿಕ ಹಾಗೂ ಸಮಾಜ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 400ಕ್ಕೂ ಹೆಚ್ಚು ವಿಶೇಷ ಕೋರ್ಸ್‌ಗಳನ್ನು ಮಾಹೆ ನೀಡುತ್ತಿದೆ. ಮಣಿಪಾಲ, ಮಂಗಳೂರು, ಬೆಂಗಳೂರು, ಜಂಶೆಡ್ಪುರ ಹಾಗೂ ದುಬೈ ಕ್ಯಾಂಪಸ್‌ಗಳ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹೆ ವಿಶಿಷ್ಟ ಗುರುತನ್ನು ಸಂಪಾದಿಸಿದೆ. 2020ರಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಮಾನ್ಯತೆಯನ್ನು ನೀಡಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) 2025ರ ಶ್ರೇಯಾಂಕದಲ್ಲಿ ದೇಶದಲ್ಲಿ 3ನೇ ಸ್ಥಾನ ಪಡೆದಿರುವ ಮಾಹೆ, ಗುಣಮಟ್ಟದ ಶಿಕ್ಷಣ, ಸಮೃದ್ಧ ಕ್ಯಾಂಪಸ್ ಜೀವನ ಮತ್ತು ಜಾಗತಿಕ ಮಟ್ಟದ ವೃತ್ತಿ ಅವಕಾಶಗಳನ್ನು ಹುಡುಕುವ ವಿದ್ಯಾರ್ಥಿಗಳ ಆದ್ಯತೆಯ ತಾಣವಾಗಿದೆ.







