ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಗೆ ಪ್ರಸ್ತಾವಿತ ತಿದ್ದುಪಡಿಯನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ವಿರೋಧಿಸುತ್ತ, ಇದು ಅಂತ್ಯೋದಯ ಅನ್ನ ಯೋಜನೆ (AAY) ಅಡಿಯಲ್ಲಿ ಅರ್ಹತೆಯ ಮಾನದಂಡಗಳನ್ನು ಕುಟುಂಬ-ಆಧಾರಿತ ವ್ಯವಸ್ಥೆಯಿಂದ ತಲಾ ವ್ಯವಸ್ಥೆಗೆ ಬದಲಾಯಿಸಲು ಪ್ರಯತ್ನಿಸುತ್ತದೆ ಎಂದು ಟಿಪ್ಪಣಿ ಮಾಡಿದೆ.
ಪ್ರತಿ ವ್ಯಕ್ತಿಗೆ 7 ಕೆಜಿ ಆಹಾರ ಧಾನ್ಯಗಳನ್ನು ಹೆಚ್ಚಿಸುವ ಪ್ರಸ್ತಾವಿತ ಬದಲಾವಣೆಯು ದೊಡ್ಡ ಕುಟುಂಬಗಳಿಗೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ, ಏಕೆಂದರೆ ಕುಟುಂಬದ ಗಾತ್ರವೇನೇ ಇದ್ದರೂ ಅವರಿಗೆ ಕೊಡುವ ಆಹಾರ ಧಾನ್ಯಗಳ ಪ್ರಮಾಣ ತಿಂಗಳಿಗೆ 35 ಕೆಜಿಗೆ ಸೀಮಿತವಾಗಿರುತ್ತದೆ. ಅದೇ ಸಮಯದಲ್ಲಿ, ಇದು ಸಣ್ಣ ಕುಟುಂಬಗಳ ಆಹಾರ ಧಾನ್ಯದ ಹಕ್ಕನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಪ್ರಸ್ತುತ ಅಸ್ತಿತ್ವದಲ್ಲಿರುವ ಯೋಜನೆಯಡಿಯಲ್ಲಿ ಪೂರ್ಣ 35 ಕೆಜಿಗೆ ಖಾತರಿ ನೀಡಲಾಗುತ್ತಿತ್ತು. ಆದ್ದರಿಂದ ತಿದ್ದುಪಡಿಯು ವಯಸ್ಸಾದ ದಂಪತಿಗಳು, ವಿಧವೆಯರು, ಅಂಗವಿಕಲರು, ಬುಡಕಟ್ಟು ಕುಟುಂಬಗಳು, ಭೂರಹಿತ ಕೃಷಿ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ದೀರ್ಘಕಾಲದ ಅನಾರೋಗ್ಯದ ವ್ಯಕ್ತಿಗಳು ಮತ್ತು ಆಹಾರ ಭದ್ರತೆಗೆ AAY ಯನ್ನೇ ಅವಲಂಬಿಸಿರುವ ಅತಿ ಸಣ್ಣ ಕುಟುಂಬಗಳು ಸೇರಿದಂತೆ ಸಮಾಜದ ಅತ್ಯಂತ ಬಡ ಮತ್ತು ಅತ್ಯಂತ ದುರ್ಬಲ ವಿಭಾಗಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತದೆ.
ಈ ತಿದ್ದುಪಡಿಯು ರಾಜ್ಯಗಳ ಮೇಲೆ, ನಿರ್ದಿಷ್ಟವಾಗಿ ಕುಟುಂಬ ಯೋಜನೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಮತ್ತು ಅದರಿಂದಾಗಿ ಕುಟುಂಬದ ಸರಾಸರಿ ಗಾತ್ರ ಕಡಿಮೆಯಿರುವ ದಕ್ಷಿಣದ ರಾಜ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ರಾಜ್ಯಗಳು ಜನಸಂಖ್ಯೆಯ ಸ್ಥಿರೀಕರಣದಲ್ಲಿ ತಮ್ಮ ಸಾಧನೆಗಳ ಹೊರತಾಗಿಯೂ ಒಟ್ಟಾರೆ ಆಹಾರಧಾನ್ಯ ಹಂಚಿಕೆಯಲ್ಲಿ ಗಮನಾರ್ಹವಾದ ಕಡಿತವನ್ನು ಅನುಭವಿಸುತ್ತವೆ.
ಹಲವು ವರ್ಷಗಳಿಂದ, NFSA ಅಡಿಯಲ್ಲಿ ಫಲಾನುಭವಿಗಳ ಪಟ್ಟಿಗಳನ್ನು ಪರಿಷ್ಕರಿಸಲು ನ್ಯಾಯಬದ್ಧವಾದ ಮತ್ತು ವ್ಯಾಪಕ ಬೆಂಬಲ ಪಡೆದಿರುವ ಬೇಡಿಕೆಯಿದೆ, ಏಕೆಂದರೆ ಈ ಪಟ್ಟಿಗಳು ಈಗ ಬಹಳ ಹಳೆಯದಾಗಿರುವ 2011 ರ ಜನಗಣತಿಯನ್ನು ಆಧರಿಸಿವೆ. ಇದರ ಫಲಿತಾಂಶವಾಗಿ, ಲಕ್ಷಾಂತರ ಅರ್ಹ ಜನಗಳು ಈ ಕಾಯಿದೆಯ ಪ್ರಯೋಜನಗಳಿಂದ ಹೊರಗಿದ್ದಾರೆ. ಫಲಾನುಭವಿಗಳ ದತ್ತಾಂಶ ಆಧಾರವನ್ನು ಸಮಕಾಲಿಕಗೊಳಿಸಿ ಪ್ರಸ್ತುತ ಜನಸಂಖ್ಯೆಗಳಿಗೆ ಅನುಗುಣವಾಗಿ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಈ ದೀರ್ಘಾವಧಿಯ ಬೇಡಿಕೆಯನ್ನು ಈಡೇರಿಸುವ ಬದಲು, ಮೋದಿ ಸರ್ಕಾರವು ಜನಸಂಖ್ಯೆಯ ಅತ್ಯಂತ ಬಡ ವಿಭಾಗಗಳಿಗೆ ಸಲ್ಲಬೇಕಾದುದನ್ನು ವಾಸ್ತವವಾಗಿ ಕಡಿಮೆ ಮಾಡುವ ತಿದ್ದುಪಡಿಯನ್ನು ತರುವ ದಾರಿಯನ್ನೇ ಆಯ್ದುಕೊಂಡಿದೆ ಎಂದು ಸಿಪಿಐ(ಎಂ) ಖೇದ ವ್ಯಕ್ತಪಡಿಸಿದೆ.
ಈ ಬಡಜನ-ವಿರೋಧಿ ತಿದ್ದುಪಡಿಯು ಕೇಂದ್ರ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯನ್ನು ಕ್ರಮೇಣ ನಿಸ್ಸಾರಗೊಳಿಸುವ ಮತ್ತು ದುರ್ಬಲಗೊಳಿಸುವ ಪ್ರಯತ್ನದಲ್ಲಿದೆ ಎಂಬುದನ್ನು ಬಯಲಿಗೆ ತರುತ್ತದೆ. ಈ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಆಹಾರವನ್ನು ಒಂದು ಕಾನೂನುಬದ್ಧ ಹಕ್ಕಾಗಿ ಸ್ಥಾಪಿಸಲು ಜನರು ನಡೆಸಿದ ನಿರಂತರ ಹೋರಾಟಗಳ ಪರಿಣಾಮವಾಗಿ ಜಾರಿಗೆ ಬಂದಿರುವ ಪ್ರಮುಖ ಶಾಸನವಾಗಿದ್ದು, ಪ್ರಸ್ತಾವಿತ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.







