ಗೋಪಾಲ ಭಂಡಾರಿ ಹೆಬ್ರಿಯ ಸಮಗ್ರ ಅಭಿವೃದ್ಧಿಯ ರೂವಾರಿ : ಮುದ್ರಾಡಿ ಮಂಜುನಾಥ ಪೂಜಾರಿ
ಹೆಬ್ರಿ : ನಿರಂತರವಾಗಿ ಬದುಕಿನ ಕೊನೆಯವರೆಗೂ ಸ್ಮರಣೀಯವಾಗಿ ಜನಸೇವೆ ಮಾಡಿ ಜನಮನದಲ್ಲಿ ಗೋಪಾಲ ಭಂಡಾರಿಯವರು ನೆಲೆಸಿದ್ದಾರೆ. ಭೂಮಸೂದೆ ಕಾಯ್ದೆಯ ಮೂಲಕ ಸಾವಿರಾರು ಒಕ್ಕಲುಗಳಿಗೆ ಭೂಮಿ ನೀಡಿ ಬದುಕಿಗೆ ದಾರಿ ತೋರಿದ್ದಾರೆ. ಬಡವರ ಪರವಾಗಿ ನಿಂತವರು, ಜೀವನದ ಕೊನೆಯ ವರೆಗೂ ಬಡವರ ಸೇವೆಯನ್ನು ಮಾಡಿದ ಎತ್ತರದ ವ್ಯಕ್ತಿತ್ವ, ಹೆಬ್ರಿಯ ಸಮಗ್ರ ಅಭಿವೃದ್ಧಿಯ ರೂವಾರಿ ಎಂದು ಎಂದು ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಮಂಗಳವಾರ ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಕಾರ್ಕಳದ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿಯವರ 75 ನೇ ಜನ್ಮ ದಿನಾಚರಣೆ ಸಲುವಾಗಿ ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಭವನದಲ್ಲಿ ವಿವಿಧ ಸಾಧಕರ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗೋಪಾಲ ಭಂಡಾರಿಯವರದು ಎತ್ತರದ ಅಪರೂಪದ ವ್ಯಕ್ತಿತ್ವ, ಅವರ ಆದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಪಾಲಿಸಿ ಬದುಕೋಣ ಎಂದು ಮಂಜುನಾಥ ಪೂಜಾರಿ ಹೇಳಿದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿ ಗೋಪಾಲ ಭಂಡಾರಿಯವರ ಸಾರ್ಥಕ ಜೀವನ ನಡೆಸಿ ಎಲ್ಲರಿಗೂ ಮಾದರಿಯಾದವರು. ಶ್ರೇಷ್ಠ ವ್ಯಕ್ತಿತ್ವ, ಅವರಿಗೆ ಯಾರೂ ಕೂಡ ಸಾಟಿ ಇಲ್ಲದ ಆದರ್ಶ ವ್ಯಕ್ತಿ ಸ್ಮರಿಸಿದರು.
ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗೋಪಾಲ ಭಂಡಾರಿಯವರು ಜನಸೇವೆಗೆ ಅತ್ಯುತ್ತಮ ಉದಾಹರಣೆ. ಜನಸೇವೆಯಲ್ಲೇ ಸಂತೋಷ ಕಂಡವರು. ಸಹನೆಯ ಸಾಕಾರ ಮೂರ್ತಿ. ಮಾನವೀಯತೆಯ ರಾಜಕಾರಣದ ಮೂಲಕ ಜನಸೇವೆ ಮಾಡಿದವರು. ಅವರ ಹೆಸರ ನಾಡಿನಲ್ಲಿ ಶಾಶ್ವತವಾಗಿದೆ ಎಂದರು. ಟ್ರಸ್ಟ್ ಮೂಲಕ ಆದ್ಯತೆಯಲ್ಲಿ ಜನರ ಸೇವೆಯನ್ನು ಮಾಡುತ್ತೇವೆ ಎಂದರು.
ತಾಣ ಸಮೀಪದಲ್ಲಿರುವ ಗೋಪಾಲ ಭಂಡಾರಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಕ್ಷಣ ಕ್ಷೇತ್ರದ ಸುಧಾರಕ ಹೆಬ್ರಿ ಎಸ್. ಆರ್. ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ನಾಗರಾಜ ಶೆಟ್ಟಿ, ಜೀವರಕ್ಷಕ ಈಶ್ವರ್ ಮಲ್ಪೆ, ಧಾರ್ಮಿಕ ಮತ್ತು ಕಂಬಳ ಕ್ರೀಡಾ ಸಂಘಟಕ ಕಿರಣ್ ತೋಳಾರ್ ಬೇಳಂಜೆ, ಕೃಷಿ ಸಾಧಕ ಶಂಭು ನಾಯ್ಕ್ ಶಿವಪುರ ಕುಬ್ರಿ, ಸಮಾಜ ಸೇವಕ ಎಳ್ಳಾರೆ ರಾಘವ ದೇವಾಡಿಗ, ಮಹಿಳಾ ಸಬಲೀಕರಣದ ಸಮಾಜ ಸೇವಕಿ ಯಶೋದ ಶೆಟ್ಟಿ ಅಜೆಕಾರು, ಸಮಾಜ ಸೇವಕ ರೋನಿ ಮರ್ರೆ ಸೀತಾನದಿ ನಾಡ್ಪಾಲು ಮತ್ತು ನಿವೃತ್ತ ಸೈನಿಕ ಚಾರ ಉಳ್ಮುಂಡು ಪ್ರಶಾಂತ ಪೂಜಾರಿ ಅವರಿಗೆ ಗೋಪಾಲ ಭಂಡಾರಿಯವರ ಸಂಸ್ಮರಣಾ ವಿಶೇಷ ಸನ್ಮಾನ ನಡೆಯಿತು.
ಬೇಳಂಜೆ, ಹೆಬ್ರಿ, ಶಿವಪುರ, ಮುನಿಯಾಲು, ಕುಕ್ಕುಜೆ, ಅಜೆಕಾರು ಮರ್ಣೆ, ಎಣ್ಣೆಹೊಳೆ, ಮುದ್ರಾಡಿ, ಶಿರ್ಲಾಲು ಗ್ರಾಮಗಳ ಸರ್ಕಾರಿ ಮತ್ತು ಅನುದಾನಿತ ಸರ್ಕಾರಿ ಶಾಲೆಗಳ 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದ ಜೊತೆಗೆ ಅಭಿನಂದನೆ ನಡೆಯಿತು. ಹೆಬ್ರಿಯ ಉದ್ಯಮಿ ಸಮಾಜ ಸೇವಕ ಸತೀಶ ಪೈ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್, ಹೆಬ್ರಿಯ ಸುಮಾ ಎನ್ ಅಡ್ಯಂತಾಯ, ಕಾರ್ಕಳದ ಭಾನು ಭಾಸ್ಕರ್, ಪರ್ಕಳ ಪರೀಕದ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ. ಶಿವಪುರ ಗೋಪಾಲ ಪೂಜಾರಿ, ಕಾರ್ಕಳ ಸುಧಾಕರ ಕೋಟ್ಯಾನ್, ವಿವಿಧ ಗಣ್ಯರು, ಗೋಪಾಲ ಭಂಡಾರಿ ಅಭಿಮಾನಿಗಳು, ಪ್ರಮುಖರು, ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ದೀಪಾ ಭಂಡಾರಿ, ಕೊಶಾಧಿಕಾರಿ ಜನಾರ್ಧನ್ ಎಚ್, ನಿರ್ದೇಶಕರಾದ ವಾದಿರಾಜ ಶೆಟ್ಟಿ ಹೆಬ್ರಿ, ರಾಜೇಶ ಭಂಡಾರಿ ಹೆಬ್ರಿ, ನವೀನ್ ಕೆ ಅಡ್ಯಂತಾಯ ಹೆಬ್ರಿ, ಸುಕುಮಾರ್ ಮುನಿಯಾಲ್, ಗೋಪಿನಾಥ ಭಟ್ ಮುನಿಯಾಲು, ಮೂರ್ಸಾಲು ಮೋಹನದಾಸ ನಾಯಕ್ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ ಶಿವಪುರ, ಬೈಕಾಡಿ ಮಮಜುನಾಥ ರಾವ್ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್ ಟೆಲ್ಲಿಸ್ ಅಜೆಕಾರು ಮತ್ತು ರಾಘವೇಂದ್ರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಹೆಬ್ರಿ ಪ್ರಸಾದ್ ಶೆಟ್ಟಿ ನಿರೂಪಿಸಿ ನವೀನ್ ಕೆ ಅಡ್ಯಂತಾಯ ಸ್ವಾಗತಿಸಿದರು. ಎಚ್. ಜನಾರ್ಧನ್ ವಂದಿಸಿದರು.







