ಮಣಿಪಾಲ್, ಮೇ 25, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು, ಪ್ರತಿಷ್ಠಿತ ‘ಯುಕೆ–ಇಂಡಿಯಾ ಹೆಲ್ತ್‌ಟೆಕ್ ಆಕ್ಸಿಲರೇಟರ್’ ಕಾರ್ಯಕ್ರಮದ 2026–2028 ಆವೃತ್ತಿಯ ಆತಿಥ್ಯ ವಹಿಸಿಕೊಳ್ಳಲಿದೆ. ಆರೋಗ್ಯ ತಂತ್ರಜ್ಞಾನ ವಲಯದಲ್ಲಿ ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ. ಇದರ ಭಾಗವಾಗಿ, 4ನೇ ಆವೃತ್ತಿಯ ಜಾಗತಿಕ ಕಾರ್ಯಕ್ರಮವು ಜುಲೈ 22 ರಿಂದ 24 ರವರೆಗೆ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯುವ ಈ ಆಕ್ಸಿಲರೇಟರ್ ಕಾರ್ಯಕ್ರಮವು ಭಾರತ ಮತ್ತು ಯುಕೆ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳು, ನೀತಿ ನಿರೂಪಕರು, ಆರೋಗ್ಯ ತಜ್ಞರು, ಹೂಡಿಕೆದಾರರು ಹಾಗೂ ಉದ್ಯಮದ ಪ್ರಮುಖರನ್ನು ಒಂದೇ ವೇದಿಕೆಗೆ ತರಲಿದೆ. ಆರೋಗ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಸಹಭಾಗಿತ್ವ, ಜ್ಞಾನ ವಿನಿಮಯ ಮತ್ತು ನಾವಿನ್ಯತೇಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶದಾದ್ಯಂತ ಒಟ್ಟು 25 ಹೆಲ್ತ್‌ಟೆಕ್ ಕಂಪನಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ಅತ್ಯುತ್ತಮ 6 ಕಂಪನಿಗಳಿಗೆ ಸಂಪೂರ್ಣ ಅನುದಾನಿತ ಯುಕೆ ಪ್ರವಾಸದ ಅವಕಾಶ ಸಿಗಲಿದ್ದು, ಅಲ್ಲಿನ ಆರೋಗ್ಯ ವ್ಯವಸ್ಥೆ ಹಾಗೂ ಉದ್ಯಮದ ಪ್ರಮುಖರೊಂದಿಗೆ ನೇರವಾಗಿ ಸಂವಹನ ನಡೆಸಲು ಅವಕಾಶವಿರುತ್ತದೆ.
ಈ ಯೋಜನೆ, ಭಾರತೀಯ ಹೆಲ್ತ್‌ಟೆಕ್ ಕಂಪನಿಗಳಿಗೆ ತಮ್ಮ ಆವಿಷ್ಕಾರಗಳನ್ನು ಯುಕೆಯ ‘ರಾಷ್ಟ್ರೀಯ ಆರೋಗ್ಯ ಸೇವೆ’ಯ ಅಡಿಯಲ್ಲಿ ವಿಸ್ತರಿಸಲು ನೆರೆವಾಗಲಿದೆ. ಇದು ಆರೋಗ್ಯ ತಂತ್ರಜ್ಞಾನ ಮತ್ತು ಡಿಜಿಟಲ್ ಆರೋಗ್ಯ ರೂಪಾಂತರದಲ್ಲಿ ಭಾರತ-ಯುಕೆ ಸಹಯೋಗವನ್ನು ಬಲಪಡಿಸುತ್ತದೆ. ಇದು ಪ್ರಮುಖವಾಗಿ ವೈದ್ಯಕೀಯ ಕ್ಷೇತ್ರದ ಉತ್ಪಾದಕತೆ, ಮುನ್ನೆಚ್ಚರಿಕೆ ಆರೈಕೆ, ರೋಗಿಗಳ ನಿರ್ವಹಣೆ, ತುರ್ತು ಚಿಕಿತ್ಸೆ, ವೃದ್ಧಾಪ್ಯದ ಆರೋಗ್ಯ ರಕ್ಷಣೆ, ಫೆಮ್‌ಟೆಕ್, ಕೃತಕ ಬುದ್ಧಿಮತ್ತೆ ಮತ್ತು ಆರೋಗ್ಯ ಡೇಟಾ ತಂತ್ರಜ್ಞಾನಗಳ ಮೇಲೆ ಗಮನ ಹರಿಸಲಿದೆ.
ಈ ಬಗ್ಗೆ ಮಾತನಾಡಿದ ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, “ಯುಕೆ-ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮದ ಆತಿಥ್ಯ ವಹಿಸಿರುವುದು ಜಾಗತಿಕ ಆರೋಗ್ಯ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮಾಹೆಯ ಬದ್ಧತೆಯನ್ನು ತೋರಿಸುತ್ತದೆ. ಬ್ರಿಟಿಷ್ ಹೈಕಮಿಷನ್ ಮತ್ತು ನಮ್ಮ ನಡುವಿನ ಬಾಂಧವ್ಯವು ಹೊಸ ಆವಿಷ್ಕಾರಗಳಿಗೆ ದಾರಿದೀಪವಾಗಿದೆ. ಪ್ರಮುಖ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳನ್ನು ಮಣಿಪಾಲಕ್ಕೆ ಸ್ವಾಗತಿಸಲು ಉತ್ಸುಕರಾಗಿದ್ದೇವೆ. ಇಲ್ಲಿ ಮೂಡಿಬರುವ ಹೊಸ ಆಲೋಚನೆಗಳು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಇರುವ ರೋಗಿಗಳಿಗೆ ನೆರವಾಗಲಿವೆ” ಎಂದರು.
ಕರ್ನಾಟಕದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, “ವಿಶ್ವದಲ್ಲೇ ಅತಿ ದೊಡ್ಡದಾದ ಭಾರತದ ಹೆಲ್ತ್‌ಟೆಕ್ ವ್ಯವಸ್ಥೆಯು ಹೊಸ ಆಲೋಚನೆ ಹಾಗೂ ಕೈಗೆಟುಕುವ ಚಿಕಿತ್ಸಾ ಪದ್ಧತಿಗಳಿಂದಾಗಿ ವೇಗವಾಗಿ ಮುನ್ನಡೆಯುತ್ತಿದೆ. ಇಂತಹ ಹೊಸ ತಂತ್ರಜ್ಞಾನಗಳನ್ನು ತರುತ್ತಿರುವ ಭಾರತದ ಕಂಪನಿಗಳ ಜತೆ ಕೈಜೋಡಿಸಲು ಬ್ರಿಟನ್ ಆಸಕ್ತಿ ಹೊಂದಿದೆ.
ಈ ಯೋಜನೆಯಡಿ ಆಯ್ಕೆಯಾಗುವ ಕಂಪನಿಗಳು ತಮ್ಮ ಪ್ರಸ್ತಾಪಗಳನ್ನು ಯುಕೆಯ ಆರೋಗ್ಯ ಆದ್ಯತೆಗಳಿಗೆ ಅನುಗುಣವಾಗಿ ಜೋಡಿಸಲು ವಿಶೇಷ ತರಬೇತಿ ನೀಡಲಾಗುತ್ತದೆ. ಅಲ್ಲಿನ ತಜ್ಞರೊಂದಿಗೆ ನೇರ ಸಂಪರ್ಕ ಕಲ್ಪಿಸಿ, ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಬೆಳೆಸಲು ಪ್ರೋತ್ಸಾಹ ನೀಡಲಾಗುವುದು.
ಪ್ರಪಂಚದಾದ್ಯಂತದ ರೋಗಿಗಳಿಗೆ ಅನುಕೂಲವಾಗುವ ಹೊಸ ತಂತ್ರಜ್ಞಾನಗಳನ್ನು ತರುವ ನಮ್ಮ ಜಂಟಿ ಆಶಯಕ್ಕೆ ಮಾಹೆ ಕೈಜೋಡಿಸಿರುವುದು ಸಂತೋಷದ ವಿಷಯ” ಎಂದರು.
ಈ ಒಪ್ಪಂದದ ಮೂಲಕ ಮಾಹೆಯು ಹೊಸ ಆವಿಷ್ಕಾರ ಹಾಗೂ ಉದ್ಯಮಶೀಲತೆಗೆ ಜಾಗತಿಕ ವೇದಿಕೆ ಕಲ್ಪಿಸುವ ತನ್ನ ನಿರ್ಧಾರವನ್ನು ಮತ್ತೊಮ್ಮ ಸಾಬೀತುಪಡಿಸಿದೆ. ಈ ಕಾರ್ಯಕ್ರಮದ ಆತಿಥ್ಯ ವಹಿಸಿರುವುದರಿಂದ ವೈದ್ಯಕೀಯ ತಂತ್ರಜ್ಞಾನದ ಪ್ರಮುಖ ಚರ್ಚೆಗಳಿಗೆ ಮಣಿಪಾಲ ಈಗ ಮುಖ್ಯ ಕೇಂದ್ರವಾಗಿದೆ. ಭಾರತದ ಯುವ ಸಂಶೋಧಕರ ನವೀನ ಆಲೋಚನೆಗಳನ್ನು ವಿಶ್ವದ ದೊಡ್ಡ ಆರೋಗ್ಯ ವ್ಯವಸ್ಥೆಗೆ ಪರಿಚಯಿಸಲು ನೆರವಾಗಲಿದೆ. ಆಸಕ್ತ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್‌ಗಳು ಈ ಕಾರ್ಯಕ್ರಮದ 4ನೇ ಆವೃತ್ತಿಯಲ್ಲಿ ಭಾಗವಹಿಸಲು ಅಧಿಕೃತ ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ನೋಂದಾವಣಿಯನ್ನು ಪೂರ್ಣಗೊಳಿಸಿ
https://eu.eventscloud.com/website/19743/home/







