ಮಣಿಪಾಲ, ಮೇ 21 : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್, ಆರ್ಟ್ಸ್ ಅಂಡ್ ಹ್ಯೂಮ್ಯಾನಿಟೀಸ್ (ಮಿಶ) ಹಾಗೂ ಏಷ್ಯನ್ ಮತ್ತು ತೌಲನಿಕ ತತ್ತ್ವಶಾಸ್ತ್ರದ ಅಂತರರಾಷ್ಟ್ರೀಯ ಸಂಘಟನೆ (ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಏಷಿಯನ್ ಆಂಡ್ ಕಂಪಾರಿಟಿವ್ ಫಿಲಾಸಫಿ- ಎಸ್‌ಎಸಿಪಿ] ಯ ಸಹಭಾಗಿತ್ವದಲ್ಲಿ ನಾಲ್ಕು ದಿನಗಳ ಸಮಾವೇಶವನ್ನು ಮಾಹೆಯ ಗಂಗೂಬಾಯಿ ಹಾನಗಲ್ ಸಭಾಗೃಹದಲ್ಲಿ ಉದ್ಘಾಟಿಸಲಾಯಿತು. ‘ಅನಿಶ್ಚಿತತೆಯ ಕಾಲದಲ್ಲಿ ಗುಣಮುಖತೆ: ಏಷ್ಯನ್ ಮತ್ತು ತೌಲನಿಕ ದೃಷ್ಟಿಕೋನಗಳು’ [ಹೀಲಿಂಗ್ ಇನ್ ಟೈಮ್ಸ್ ಆಫ್ ಪ್ರಿಕ್ಯಾರಿಟಿ : ಏಷ್ಯನ್ ಆಂಟ್ ಕಂಪಾರಿಟಿವ್ ಎಪ್ರಾಚಸ್] ಎಂಬುದು ಈ ಸಮಾವೇಶದ ಕೇಂದ್ರ ವಿಷಯವಾಗಿದ್ದು ಇದರಲ್ಲಿ 30 ಮಂದಿ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಕುಲಪತಿಗಳಾದ ಡಾ. ಶರತ್ ರಾವ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತ ‘ಗುಣಮುಖತೆ’ ಪರಿಕಲ್ಪನೆಯ ಪ್ರಾಮುಖ್ಯವನ್ನು ಎತ್ತಿ ಹಿಡಿದರು. ‘ಗುಣಮುಖತೆ ಎಂಬುದು ಕೇವಲ ದೈಹಿಕವಾಗಿ ಆದರೆ ಮಾತ್ರ ಸಾಲದು. ಅದಕ್ಕೆ ಮಾನಸಿಕವಾದ, ಆಧ್ಯಾತ್ಮಿಕವಾದ ಆಯಾಮವೂ ಇದೆ’ ಎಂದು ಹೇಳಿದ ಡಾ. ರಾವ್ ’ವೈಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ರಕ್ಷಿಸುವಲ್ಲಿ ಗುಣಮುಖತೆಯ ಕುರಿತ ತತ್ತ್ವಜ್ಞಾನ ಚಿಂತನೆಯ ಗೋಷ್ಠಿಗಳು ಮಹತ್ವ ಪಡೆಯುತ್ತವೆ’ ಎಂದರು. ಮೂಳೆ ಶಸ್ತ್ರಚಿಕಿತ್ಸ ತಜ್ಞರಾಗಿ ರೋಗನಿದಾನದ ಕುರಿತ ಸಾಂದ್ರ ಅನುಭವವನ್ನು ಹಂಚಿಕೊಂಡರು.
ಎಸ್‌ಎಸಿಪಿಯ ಅಧ್ಯಕ್ಷ ಮತ್ತು ಸಮಾವೇಶದ ಸಂಚಾಲಕ, ಸ್ಯಾನ್‌ಫ್ರಾನ್ಸಿಸ್ಕೋ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಜಿಯಾಫ್ ಆಸ್ಟನ್ ಅವರು ಮಾತನಾಡಿ, ‘ಏಷ್ಯನ್ ಮತ್ತು ತೌಲನಿಕ ತತ್ತ್ವಶಾಸ್ತ್ರದ ಅಂತಾರಾಷ್ಟ್ರೀಯ ಸಂಘಟನೆ (ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಏಷಿಯನ್ ಆಂಡ್ ಕಂಪಾರಿಟಿವ್ ಫಿಲಾಸಫಿ- ಎಸ್‌ಎಸಿಪಿ] ಸ್ಥಾಪನೆಯಾದ ಕಳೆದ 58 ವರ್ಷಗಳಲ್ಲಿ ಎರಡನೆಯ ಬಾರಿಗೆ ವಾರ್ಷಿಕ ಸಮಾವೇಶ ಭಾರತದಲ್ಲಿ ನಡೆಯುತ್ತಿದೆ. ಭಾರತ ವೈವಿಧ್ಯಮಯವಾದ ದೇಶ. ಇಲ್ಲಿ ಭವ್ಯವಾದ ಆಧ್ಯಾತ್ಮಿಕ ಪರಂಪರೆ, ಶುಶ್ರೂಷಾ ಪರಂಪರೆಗಳ ತಾಯ್ನಾಡಾದ ಭಾರತದಲ್ಲಿ ಎಸ್‌ಎಸಿಪಿಯ ವಾರ್ಷಿಕ ಸಮಾವೇಶ ನಡೆಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ’ ಎಂದರು.
ಮಿಶದ ನಿರ್ದೇಶಕರಾಗಿರುವ ಡಾ. ಗಾಯತ್ರಿ ಪ್ರಭು ಅವರು ಮಾತನಾಡಿ, ಪ್ರಸ್ತುತ ಸಮಾವೇಶವು ಕಲೆ ಮತ್ತು ವಿಜ್ಞಾನದ ಸಮನ್ವಯವನ್ನು ಎತ್ತಿ ಹಿಡಿಯುತ್ತದೆ. ಇಂಥ ಮಹತ್ವದ ಕ್ಷೇತ್ರವನ್ನು ಕ್ರಿಯಾಶೀಲವಾಗಿ ಮುನ್ನಡೆಸಲು ಮಾಹೆ ಸದಾ ಬದ್ಧವಾಗಿದೆ’ ಎಂಬುದನ್ನು ಒತ್ತಿಹೇಳಿದರು.
ಸಮಾವೇಶದ ಸಂಯೋಜಕರಲ್ಲೊಬ್ಬರಾದ ಮಿಶದ ತತ್ತ್ವಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಾರ್ಲ್-ಸ್ಟೀಫನ್ ಬೋಥಿಲೆಟ್ ಅವರು ಸಮಾವೇಶ ಸಂಯೋಜನೆಯ ಔಚಿತ್ಯ ಮತ್ತು ಅಗತ್ಯವನ್ನು ವಿವರಿಸಿದರು. ತತ್ತ್ವಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಕುಮಾರ್ ಎನ್. ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತತ್ತ್ವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕೊಲ್ಯಾಣಿ ಗುಪ್ತ ಅವರು ಕಾರ್ಯಕ್ರಮ ನಿರ್ವಹಿಸಿದರು.
’ಅನಿಶ್ಚಿತತೆಯ ಕಾಲದಲ್ಲಿ ಗುಣಮುಖತೆ: ಏಷ್ಯನ್ ಮತ್ತು ತೌಲನಿಕ ದೃಷ್ಟಿಕೋನಗಳು’ ಎಂಬ ವಿಷಯವು ಇಂದಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತವಾಗಿದ್ದು ಈ ಸಮಾವೇಶದಲ್ಲಿ ಚರ್ಚೆಯಾಗುವ ವಿಚಾರಗಳು ಸಮಾಜಕ್ಕೆ ಉಪಯುಕ್ತವಾಗಿವೆ. ಆರೋಗ್ಯ ಮತ್ತು ಚಿಕಿತ್ಸೆಯಲ್ಲಿ ಧಾರ್ಮಿಕ ಹಾಗೂ ತತ್ತ್ವಶಾಸ್ತ್ರೀಯ ದೃಷ್ಟಿಕೋನಗಳ ಬಳಕೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸಾಮಾಜಿಕ ಮತ್ತು ಮನೋವೈಜ್ಞಾನಿಕ ಸಾಧ್ಯತೆ, ಪ್ರಾಣಾಪಾಯದಿಂದ ಪಾರಾಗುವಿಕೆ ಮತ್ತು ಆರೈಕೆಗೆ ಸಂಬಂಧಿಸಿ ಪ್ರೇರಣಾದಾಯಕ ವಿಚಾರ, ಪರಂಪರೆ, ಪುರಾಣ, ಸಾಂಸ್ಕೃತಿಕ ಆಚರಣೆಗಳ ಪಾತ್ರ, ವೈಯಕ್ತಿಕ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿ ಧ್ಯಾನ ಮತ್ತು ಯೋಗದ ಮಹತ್ತ್ವ- ಇತ್ಯಾದಿ ವಿಷಯಗಳು ಇಲ್ಲಿ ಪ್ರಸ್ತಾವನೆಗಳೊಳ್ಳಲಿವೆ. ಭಾರತೀಯ ಜ್ಞಾನ ಪರಂಪರೆಗಳ ಜೀವಂತಿಕೆಯನ್ನು ಎತ್ತಿಹಿಡಿಯುವುದರ ಜೊತೆಗೆ, ಈ ಸಮಾವೇಶದಲ್ಲಿ ಬೌದ್ಧ, ಜೈನ ಮತ್ತು ವೈದಿಕ ಪರಂಪರೆಗಳಲ್ಲಿರುವ ಅರಿವಿನ ಸಂಪನ್ಮೂಲಗಳತ್ತ ವಿಶೇಷ ಗಮನ ಹರಿಸಲಾಗುತ್ತದೆ. ಸಮಾವೇಶದಲ್ಲಿ ಮಂಡನೆಯಾಗುತ್ತಿರುವ ಸಂಶೋಧನ ಪ್ರಬಂಧಗಳು ಮತ್ತು ಸಂವಾದಗಳ ಮೂಲಕ ಭಾರತೀಯ ಮತ್ತು ಪಾಶ್ಚಾತ್ಯ-ಪೂರ್ವ ಏಷ್ಯಾಗಳಂಥ ಜಾಗತಿಕ ಪರಂಪರೆಗಳೊಂದಿಗೆ ಇರುವ ಸಾಮ್ಯ ಮತ್ತು ಭಿನ್ನತೆಗಳನ್ನು ಪರಿಶೀಲಿಸಲಿವೆ.








