ಮಣಿಪಾಲ, ಮೇ 19, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿಸಲಾಗಿರುವ ಉತ್ಕೃಷ್ಟ ಸಂಸ್ಥೆಯ ಅಂಗಸಂಸ್ಥೆಗಳಾದ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್ ಜಂಟಿಯಾಗಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಆಚರಿಸಿತು.
ಈ ವರ್ಷದ ಅಂತರರಾಷ್ಟ್ರೀಯ ದಾದಿಯರ ಮಂಡಳಿ (ಐಸಿಎನ್) ಘೋಷವಾಕ್ಯವಾದ “ನಮ್ಮ ದಾದಿಯರು, ನಮ್ಮ ಭವಿಷ್ಯ: ಸಬಲರಾದ ದಾದಿಯರು ಜೀವರಕ್ಷಕರು” (Our Nurses, Our Future: Empowered Nurses Save Lives) ಎಂಬ ವಿಷಯದ ಅಡಿಯಲ್ಲಿ ವಿವಿಧ ಶೈಕ್ಷಣಿಕ, ವೃತ್ತಿಪರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಆಧುನಿಕ ಶುಶ್ರೂಷಾ ಕ್ಷೇತ್ರದ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ನೆನಪಿಗಾಗಿ ಮತ್ತು ವಿಶ್ವಾದ್ಯಂತ ಸಮಾಜಕ್ಕೆ ದಾದಿಯರು ನೀಡುತ್ತಿರುವ ಸಮರ್ಪಣೆ, ಸಹಾನುಭೂತಿ ಹಾಗೂ ಉತ್ತಮ ಕೊಡುಗೆಗಳನ್ನು ಗುರುತಿಸಲು ಪ್ರತಿವರ್ಷ ಅಂತರರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ.
ಈ ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಜ್ಯಾನೆಟ್ ಪ್ರಮೀಳಾ ಡಿಸೋಜಾ ಅವರು ದಾದಿಯರ ವಾರದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ವರದಿಯನ್ನು ಮಂಡಿಸಿದರು. ಇದರ ಭಾಗವಾಗಿ ಸೆಮಿನಾರ್, ಟ್ರಾಮಾ ಮ್ಯಾನೇಜ್‌ಮೆಂಟ್ ಕುರಿತು ಕಾರ್ಯಾಗಾರ, ದೂರದರ್ಶನ ಸಂದರ್ಶನ ಹಾಗೂ ವಿದ್ಯಾರ್ಥಿಗಳಿಗೆ ಆಶುಭಾಷಣ, ಕೊಲಾಜ್ ಮೇಕಿಂಗ್, ರೀಲ್ಸ್ ಮೇಕಿಂಗ್ ಮತ್ತು ಪೋಸ್ಟರ್ ಪ್ರೆಸೆಂಟೇಶನ್ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಯಮತ್ತೂರಿನ ರಾಯಲ್ ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರ್ಸಿಂಗ್ ಡೈರೆಕ್ಟರ್ ಡಾ. ಶ್ಯಾಮಲಾ ಕುಮಾರ್ ಅವರು ಮಾತನಾಡಿ, ʼಆಧುನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ದಾದಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಒಂದು ದಾದಿಯ ಉಪಸ್ಥಿತಿಯೇ ರೋಗಿಗೆ ಪರಮ ಔಷಧಿಯಿದ್ದಂತೆ. ಶುಶ್ರೂಷಾ ವೃತ್ತಿಯು ಕೇವಲ ಜೀವನಾಧಾರಕ್ಕೆ ಸೀಮಿತವಾಗಿಲ್ಲ. ಅದು ಸಹಾನುಭೂತಿ, ನಾಯಕತ್ವ ಮತ್ತು ರೋಗಿ ಕೇಂದ್ರಿತ ಕಾಳಜಿಯನ್ನೊಳಗೊಂಡ ಒಂದು ಸುಂದರ ಜವಾಬ್ದಾರಿಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಯೋಗಕ್ಷೇಮ, ನಿರಂತರ ವೃತ್ತಿಪರ ಕಲಿಕೆ ಹಾಗೂ ಪೂರಕ ಸೇವಾ ವಾತಾವರಣ ನಿರ್ಮಾಣವಾಗಬೇಕಿದೆʼ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರೋಗಿಗಳ ಆರೈಕೆ ಮತ್ತು ಸಮುದಾಯ ಆರೋಗ್ಯ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿದ ಮಣಿಪಾಲ ಕಸ್ತೂರಬಾ ಆಸ್ಪತ್ರೆಯ ವಾರ್ಡ್ ಸಿಸ್ಟರ್ ಶ್ರೀಮತಿ ಸುಜಾತಾ ಬಿ. ಮತ್ತು ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಲಕ್ಷ್ಮಿ ಬಿ. ಅವರನ್ನು ಸನ್ಮಾನಿಸಲಾಯಿತು. ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್ ಪ್ರಿನ್ಸಿಪಾಲ್ ಡಾ. ಲೀನಾ ಸಿಕ್ವೇರಾ ಪ್ರಶಸ್ತಿ ಪುರಸ್ಕೃತರ ಸಾಧನೆ ಮತ್ತು ಸಮರ್ಪಣಾ ಮನೋಭಾವದ ಸೇವೆಯನ್ನು ಶ್ಲಾಘಿಸಿದರು.
ಮಣಿಪಾಲ್ ಸ್ಕೂಲ್ ಆಫ್ ನರ್ಸಿಂಗ್‌ನ ಮಾಜಿ ಪ್ರಿನ್ಸಿಪಾಲ್ ಡಾ. ಕಸ್ತೂರಿ ಆರ್. ಅಡಿಗ ಅವರು ಸ್ಥಾಪಿಸಿದ ‘ಕ್ಲಿನಿಕಲ್ ಪ್ರಾಕ್ಟೀಸ್‌ನಲ್ಲಿ ಅತ್ಯುತ್ತಮ ಸಾಧನೆ’ ಪ್ರಶಸ್ತಿಯನ್ನು ತುರ್ತು ಚಿಕಿತ್ಸಾ ವಿಭಾಗದ ಸ್ಟಾಫ್ ನರ್ಸ್ ಶಿವ ಪ್ರಸಾದ್ ಅವರಿಗೆ ಪ್ರದಾನ ಮಾಡಲಾಯಿತು. ಅಕಾಡೆಮಿಕ್ ಮತ್ತು ಕ್ಲಿನಿಕಲ್ ಸಾಧನೆಗಾಗಿ ವಿದ್ಯಾರ್ಥಿಗಳಾದ ಅಭಿಷೇಕ್ ಕುಮಾರ್ (ದ್ವಿತೀಯ ವರ್ಷದ PBBSc ನರ್ಸಿಂಗ್ ವಿದ್ಯಾರ್ಥಿ) ಮತ್ತು ಕುಮಾರಿ ಸಾನಿಯಾ ದಾಸ್ (ತೃತೀಯ ವರ್ಷದ GNM ವಿದ್ಯಾರ್ಥಿನಿ) ಅವರಿಗೆ ವಿದ್ಯಾರ್ಥಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾದ ʼಗುಣಮಟ್ಟದ ಶಿಕ್ಷಣ’ಕ್ಕೆ ಅನುಗುಣವಾಗಿದೆ. ಇದು ಎಲ್ಲರಿಗೂ ಒಳಗೊಳ್ಳುವ ಮತ್ತು ಸಮಾನವಾದ ಗುಣಮಟ್ಟದ ಶಿಕ್ಷಣ ಹಾಗೂ ನಿರಂತರ ಕಲಿಕೆಯ ಅವಕಾಶಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.







